ಟಾಲಿವುಡ್ ಸ್ಟಾರ್ ನಟ ಜೂನಿಯರ್ ಎನ್ ಟಿ ಆರ್ ನಟನೆಯ ಅರವಿಂದ ‘ಸಮೇತ ವೀರ ರಾಘವ’ ಸಿನಿಮಾದಲ್ಲಿ ತಮಗೆ ಅನ್ಯಾಯವಾಗಿದೆ ಎಂದು ನಟಿ ಇಶಾ ರೆಬ್ಬಾ ಆರೋಪಿಸಿದ್ದಾರೆ. ಆ ಸಿನಿಮಾದಲ್ಲಿ ತಮಗೆ ಅನ್ಯಾಯವಾಗಿದೆ ಎಂದು ಇತ್ತೀಚೆಗಿನ ಸಂದರ್ಶನವೊಂದರಲ್ಲಿ ನಟಿ ಆರೋಪ ಮಾಡಿದ್ದಾರೆ. ವಿಶೇಷವಾಗಿ ನಿರ್ದೇಶಕ ತ್ರಿವಿಕ್ರಮ್ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ನಟಿ ಇಶಾ ರೆಬ್ಬಾ ‘ಲೈಫ್ ಈಸ್ ಬ್ಯೂಟಿಫುಲ್’, ‘ಅಂತಕ ಮುಂದು ಆ ತರವಾತ’, ‘ಓಯ್’ ಇನ್ನೂ ಹಲವು ತೆಲುಗು, ತಮಿಳು, ಮಲಯಾಳಂ ಸಿನಿಮಾಗಳಲ್ಲಿ ನಟಿಸಿದ್ದಾರೆ. ‘ಅರವಿಂದ ಸಮೇತ ವೀರ ರಾಘವ’ ಸಿನಿಮಾದಲ್ಲಿ ಜೂನಿಯರ್ ಎನ್ ಟಿ ಆರ್ ಗೆ ಜೋಡಿಯಾಗಿ ಪೂಜಾ ಹೆಗ್ಡೆ ಕಾಣಿಸಿಕೊಂಡಿದ್ದರು. ತ್ರಿವಿಕ್ರಮ್, ಇಶಾ ರೆಬ್ಬ ಅವರನ್ನು ಸಂಪರ್ಕಿಸಿದಾಗ, ಈ ಸಿನಿಮಾದ ಎರಡನೇ ನಾಯಕಿ ನೀವಾಗಿರುತ್ತೀರ ಎಂದಿದ್ದರಂತೆ. ಸಿನಿಮಾಕ್ಕಾಗಿ ಪ್ರವಾಸವನ್ನು ಮೊಟಕುಗೊಳಿಸಿ ಬಂದಿದ್ದರಂತೆ ಇಶಾ ರೆಬ್ಬ, ಸಿನಿಮಾದಲ್ಲಿ ಜೂ ಎನ್ಟಿಆರ್ ಜೊತೆಗೆ ಒಂದು ಹಾಡನ್ನು ಸಹ ಶೂಟ್ ಮಾಡಲಾಗಿತ್ತಂತೆ. ಹಾಡಿಗಾಗಿ ಬುಲೆಟ್ ಚಲಾಯಿಸುವುದನ್ನು ಸಹ ಇಶಾ ಕಲಿತರಂತೆ ಆದರೆ ಸಿನಿಮಾ ಬಿಡುಗಡೆ ಆದಾಗ ಅವರ ಪಾತ್ರಕ್ಕೆ ವಿಪರೀತ ಕತ್ತರಿ ಪ್ರಯೋಗ ಮಾಡಲಾಗಿತ್ತು ಎಂದು ಆರೋಪಿಸಿದ್ದಾರೆ.
ನಾಯಕಿ ಅರವಿಂದ (ಪೂಜಾ ಹೆಗ್ಡೆ)ಯ ಸಹೋದರಿ ಪಾತ್ರದಲ್ಲಿ ಇಶಾ, ಆ ಸಿನಿಮಾನಲ್ಲಿ ನಟಿಸಿದ್ದರು. ನಾಯಕನ ಮೇಲೆ ಪ್ರೀತಿ ಇಟ್ಟುಕೊಳ್ಳುವ ಪಾತ್ರವದು, ಸಿನಿಮಾದ ಚಿತ್ರೀಕರಣ ನಡೆದಾಗ ಜೂ ಎನ್ಟಿಆರ್ ಹಾಗೂ ಇಶಾ ನಡುವೆ ಹಲವು ದೃಶ್ಯಗಳನ್ನು ಚಿತ್ರೀಕರಣ ಮಾಡಲಾಗಿತ್ತಂತೆ. ಹಲವು ಹಾಸ್ಯ ದೃಶ್ಯಗಳು, ರೊಮ್ಯಾಂಟಿಕ್ ದೃಶ್ಯಗಳು ಸಹ ಇದ್ದವಂತೆ. ಆದರೆ ನಿರ್ದೇಶಕರು ಹಲವಾರು ದೃಶ್ಯಗಳಿಗೆ ಕತ್ತರಿ ಹಾಕಿದರಂತೆ. ಸಿನಿಮಾ ನೋಡಿದವರು ಇಶಾ ಪಾತ್ರಕ್ಕೆ ಪ್ರಾಮುಖ್ಯತೆಯೇ ಇಲ್ಲ ಎಂದಿದ್ದರಂತೆ. ಇದು ಇಶಾಗೆ ಬಹಳ ಬೇಸರ ತರಿಸಿತ್ತಂತೆ.
ತಮ್ಮ ದೃಶ್ಯಗಳಿಗೆ ಕತ್ತರಿ ಹಾಕಿರುವ ಬಗ್ಗೆ ಇಶಾ, ನಿರ್ದೇಶಕ ತ್ರಿವಿಕ್ರಮ್ ಬಳಿ ಖುದ್ದಾಗಿ ಪ್ರಶ್ನೆ ಮಾಡಿದರಂತೆ, ಅದಕ್ಕೆ ತ್ರಿವಿಕ್ರಮ್, ‘ನಿಮ್ಮನ್ನು ಸಿನಿಮಾದ ಎರಡನೇ ನಾಯಕಿ ಎಂದು ಪ್ರಚಾರ ಮಾಡುತ್ತಿದ್ದೀವಿ ಅಷ್ಟು ಸಾಲದೆ’ ಎಂದು ಉತ್ತರಿಸಿದ್ದರು ಎಂದಿದ್ದಾರೆ ನಟಿ ಇಶಾ. ‘ಅರವಿಂದ ಸಮೇತ ವೀರ ರಾಘವ’ ಸಿನಿಮಾ 2018ರಲ್ಲಿ ಬಿಡುಗಡೆ ಆಗಿತ್ತು. ರಾಯಲಸೀಮ ಕುಟುಂಬ ದ್ವೇಷದ ಕುರಿತಾದ ಕತೆಯನ್ನು ಆ ಸಿನಿಮಾ ಒಳಗೊಂಡಿತ್ತು. ತಲೆ ತಲಾಂತರಗಳಿಂದಲೂ ಇರುವ ದ್ವೇಷವನ್ನು ಅಂತ್ಯ ಮಾಡುವ ವ್ಯಕ್ತಿಯ ಪಾತ್ರದಲ್ಲಿ ಜೂ ಎನ್ಟಿಆರ್ ಕಾಣಿಸಿಕೊಂಡಿದ್ದರು.