ಕನ್ನಡ ಸಿನಿಮಾ ರಂಗದ ಖ್ಯಾತ ನಟಿ ನಿಶ್ವಿಕಾ ನಾಯ್ಡು ನಾಳೆ 28ನೇ ವಯಸ್ಸಿಗೆ ಕಾಲಿಡುತ್ತಿದ್ದಾರೆ. ಆದರೆ ನಿಶ್ವಿಕಾ ಈ ವರ್ಷ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳದೆ ಇರಲು ನಿರ್ಧರಿಸಿದ್ದು ಇದಕ್ಕೆ ಕಾರಣವನ್ನು ನೀಡಿದ್ದಾರೆ.
‘ಈ ವರ್ಷ ನನ್ನ ವೈಯಕ್ತಿಕ ಜೀವನದಲ್ಲಿ ಭಾವನಾತ್ಮಕವಾಗಿ ಕೆಲವು ಏರುಪೇರುಗಳು ಆಗಿವೆ. ನನ್ನ ಪ್ರೀತಿಯ ಲಿಯೋ ಇತ್ತೀಚೆಗೆ ನಮ್ಮನ್ನೆಲ್ಲ ಬಿಟ್ಟು ಹೋದ. ಈ ಆಕಸ್ಮಿಕ ಘಟನೆ ನನ್ನ ಜೀವನಕ್ಕೆ ಮತ್ತು ಮನಸಿಗೆ ತುಂಬಾ ಆಳವಾದ ನೋವನ್ನುಂಟು ಮಾಡಿದೆ. ಅದರಿಂದ ಈ ವರ್ಷ ನನ್ನ ಜನ್ಮದಿನವನ್ನು ಆಚರಿಸದಿರಲು ನಾನು ನಿರ್ಧರಿಸಿದ್ದೇನೆ’ ಎಂದು ನಿಶ್ವಿಕಾ ಬರೆದುಕೊಂಡಿದ್ದಾರೆ.
‘ಲಿಯೋ ನಮ್ಮ ಕುಟುಂಬದಲ್ಲಿ ಒಬ್ಬನ್ನಾಗಿದ್ದ ಮತ್ತು ಅವನ ಅನುಪಸ್ಥಿತಿಯು ನಮ್ಮ ಕುಟುಂಬದ ಮನಸ್ಸುಗಳ ಮೇಲೆ ಬಹಳ ದೊಡ್ಡ ಗಾಯ ಮಾಡಿದೆ. ದಯವಿಟ್ಟು ನನ್ನ ಭಾವನೆಗಳಿಗೆ ಬೆಲೆ ಕೊಟ್ಟು ಈ ಬಾರಿ ನನ್ನ ಹುಟ್ಟುಹಬ್ಬದ ದಿನದಂದು ಯಾರೂ ಕೂಡ ನನ್ನನ್ನು ಭೇಟಿ ಮಾಡಲು ಬರಬೇಡಿ ಅಥವಾ ಉಡುಗೊರೆಗಳನ್ನು ತರಬೇಡಿ ಎಂದು ಈ ಮೂಲಕ ಕೇಳಿಕೊಳ್ಳುತ್ತೇನೆ’ ಎಂದು ನಿಶ್ವಿಕಾ ಮನವಿ ಮಾಡಿದ್ದಾರೆ.