ತಮಿಳು ಚಿತ್ರರಂಗದ ಲೇಡಿ ಸೂಪರ್ ಸ್ಟಾರ್ ನಯನತಾರಾ ಹಾಗೂ ನಿರ್ದೇಶಕ ವಿಘ್ನೇಶ್ ಶಿವನ್ ದಂಪತಿ ಸದಾ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಲ್ಲಿರುತ್ತಾರೆ. ಇದೀಗ ಅವಳಿ ಮಕ್ಕಳ ಜೊತೆ ನಯನಾತಾರಾ ದಂಪತಿ ಮನೆಯಿಂದ ಹೊರ ಬಂದಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕಳೆದ ವರ್ಷ ನಯನತಾರಾ- ವಿಘ್ನೇಶ್ ಶಿವನ್ ಅದ್ದೂರಿಯಾಗಿ ಮದುವೆಯಾದರು. ಬಳಿಕ ಬಾಡಿಗೆ ತಾಯ್ತನದ ಮೂಲಕ ಅವಳಿ ಮಕ್ಕಳನ್ನು ಈ ಜೋಡಿ ಪಡೆದಿದ್ದರು. ಕ್ಯಾಮೆರಾ ಕಣ್ಣಿಗೆ ಮಕ್ಕಳ ಮುಖ ತೋರಿಸದೇ ಆಗಾಗ ಮಕ್ಕಳ ಜೊತೆಗಿನ ಫೋಟೋವನ್ನ ಸೋಷಿಯಲ್ ಮೀಡಿಯಾದಲ್ಲಿ ವಿಘ್ನೇಶ್ ಶಿವನ್ ಶೇರ್ ಮಾಡುತ್ತಿರುತ್ತಾರೆ.
ನಯನತಾರಾ ದಂಪತಿಯ ಮುದ್ದಾದ ಮಕ್ಕಳನ್ನು ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿರುವ ಬೆನ್ನಲ್ಲೇ ಮಕ್ಕಳನ್ನು ಕರೆದುಕೊಂಡು ಈ ಜೋಡಿ ರಸ್ತೆಗಿಳಿದಿದ್ದಾರೆ. ಆದರೆ ಮಕ್ಕಳ ಮುಖ ತೋರಿಸದೇ ದಂಪತಿಗಳಿಬ್ಬರು ವಿಮಾನ ನಿಲ್ದಾಣದ ಒಳಗೆ ಹೋಗಿದ್ದಾರೆ. ನಯನತಾರಾ ಒಂದು ಮಗುವನ್ನು ಹಾಗೂ ವಿಘ್ನೇಶ್ ಶಿವನ್ ಮತ್ತೊಂದು ಮಗುವನ್ನು ಹಿಡಿದುಕೊಂಡು ಮಕ್ಕಳ ಮುಖವನ್ನು ತೋರಿಸಲೇಬಾರದು ಎಂದು ಪಣತೊಟ್ಟವರಂತೆ ಬಿಗಿಯಾಗಿ ಹಿಡಿದು ಕ್ಯಾಮೆರಾ ಕಣ್ಣಿಗೆ ಕಾಣದಂತೆ ಮರೆಮಾಚಿದ್ದಾರೆ.