ಬಾಲಿವುಡ್ ಬ್ಯೂಟಿ, ನಟಿ ಶ್ರೀದೇವಿ ಪುತ್ರಿ ಜಾನ್ವಿ ಕಪೂರ್ ಬಾಲಿವುಡ್ ಜೊತೆಗೆ ದಕ್ಷಿಣ ಭಾರತದ ಸಿನಿಮಾಗಳಲ್ಲೂ ಬ್ಯುಸಿಯಾಗಿದ್ದಾರೆ. ನಟಿಯ ಸಖತ್ ಗ್ಲಾಮರಸ್ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತದೆ. ಕೆಲವರು ಮೆಚ್ಚುಗೆ ಸೂಚಿಸುತ್ತಾರೆ. ಆದರೆ ಇನ್ನೂ ಕೆಲವರು ಕೆಟ್ಟದಾಗಿ ಟ್ರೋಲ್ ಮಾಡುತ್ತಾರೆ. ಸಾರ್ವಜನಿಕ ಜೀವನದಲ್ಲಿ ಇರುವ ನಟಿಯರು ಇಂಥದ್ದನ್ನು ಪ್ರತಿ ದಿನವೂ ಎದುರಿಸುತ್ತಾರೆ. ಅದಕ್ಕೆ ಜಾನ್ವಿ ಕಪೂರ್ ಕೂಡ ಹೊರತಾಗಿಲ್ಲ. ಇತ್ತೀಚೆಗೆ ಅವರು ಕರಣ್ ಜೋಹರ್ಗೆ ನೀಡಿದ ಸಂದರ್ಶನದಲ್ಲಿ ಈ ವಿಷಯದ ಬಗ್ಗೆ ಮಾತನಾಡಿದ್ದಾರೆ.
ಬಾಲಕಿ ಆಗಿದ್ದಾಗಲೇ ತಮ್ಮ ಫೋಟೋವನ್ನು ಅಶ್ಲೀಲ ವೆಬ್ಸೈಟ್ನಲ್ಲಿ ಹಾಕಲಾಗಿತ್ತು ಎಂದು ಜಾನ್ವಿ ಕಪೂರ್ ನೋವು ತೋಡಿಕೊಂಡಿದ್ದಾರೆ.
‘ಮಿಸ್ಟರ್ ಆ್ಯಂಡ್ ಮಿಸೆಸ್ ಮಾಹಿ’ ಸಿನಿಮಾದಲ್ಲಿ ಜಾನ್ವಿ ಕಪೂರ್ ಅವರು ನಟಿಸಿದ್ದಾರೆ. ಮೇ 31ರಂದು ಈ ಸಿನಿಮಾ ಬಿಡುಗಡೆ ಆಗಲಿದೆ. ನಟ ರಾಜ್ಕುಮಾರ್ ರಾವ್ ಜೊತೆ ಜಾನ್ವಿ ಕಪೂರ್ ತೆರೆಹಂಚಿಕೊಂಡಿದ್ದಾರೆ. ಚಿತ್ರದ ಕುರಿತು ಕರಣ್ ಜೋಹರ್ ಅವರ ಸಂದರ್ಶನ ನಡೆಸಿದ್ದಾರೆ. ಈ ವೇಳೆ ಜಾನ್ವಿ ಕಪೂರ್ ಅವರ ವೈಯಕ್ತಿಕ ಜೀವನದ ಬಗ್ಗೆಯೂ ಪ್ರಶ್ನೆಗಳು ಎದುರಾಗಿದ್ದು ಈ ವೇಳೆ ತಾವು ಅನುಭವಿಸಿದ ನೋವನ್ನು ನಟಿ ಹೇಳಿಕೊಂಡಿದ್ದಾರೆ.
‘ಇದನ್ನು ನಾನು ತುಂಬ ವರ್ಷಗಳಿಂದ ನೋಡುತ್ತಾ ಬಂದಿದ್ದೇನೆ. ನಾನು 12 ಅಥವಾ 13 ವರ್ಷದ ಬಾಲಕಿ ಆಗಿದ್ದಾಗ ಮೊದಲ ಬಾರಿಗೆ ಮಾಧ್ಯಮಗಳು ನನ್ನನ್ನು ಕೆಟ್ಟ ರೀತಿಯಲ್ಲಿ ಬಿಂಬಿಸಿದ್ದವು. ಅಪ್ಪ-ಅಮ್ಮನ ಜೊತೆ ನಾನು ಕಾರ್ಯಕ್ರಮವೊಂದಕ್ಕೆ ಹೋಗಿದ್ದೆ. ಆ ಸಂದರ್ಭದಲ್ಲಿ ಕ್ಲಿಕ್ಕಿಸಿದ ನನ್ನ ಫೋಟೋಗಳನ್ನು ಮೀಡಿಯಾದಲ್ಲಿ ಪ್ರಕಟಿಸಿದ್ದರು’ ಎಂದಿದ್ದಾರೆ ಜಾನ್ವಿ ಕಪೂರ್.
‘ಆತತಾನೇ ಸೋಶಿಯಲ್ ಮೀಡಿಯಾ ಅಥವಾ ಇನ್ಸ್ಟಾಗ್ರಾಮ್ ಜನಪ್ರಿಯತೆ ಪಡೆದುಕೊಳ್ಳುತ್ತಿತ್ತು. ಅಶ್ಲೀಲ ವೆಬ್ಸೈಟ್ ರೀತಿ ಕಾಣುವಂತಹ ಜಾಲತಾಣದಲ್ಲಿ ನನ್ನ ಫೋಟೋಗಳನ್ನು ಹಾಕಿದ್ದರು. ನಮ್ಮ ಶಾಲೆಯಲ್ಲಿನ ಹುಡುಗರು ಆ ಫೋಟೋಗಳನ್ನು ನೋಡಿ ನಗುತ್ತಿದ್ದರು. ಅದೊಂದು ವಿಚಿತ್ರವಾದ ಸಂಗತಿ’ ಎಂದು ಜಾನ್ವಿ ಕಪೂರ್ ಹೇಳಿದ್ದಾರೆ. ಇಂದಿಗೂ ಕೂಡ ಜಾನ್ವಿ ಕಪೂರ್ ಅವರನ್ನು ಕೆಲವರು ಟ್ರೋಲ್ ಮಾಡುತ್ತಾರೆ. ನೆಪೋಟಿಸಂ ಫಲಾನುಭವಿ ಎಂದು ಜನರು ಅಣಕಿಸುತ್ತಾರೆ. ಆದರೆ ಇದ್ಯಾವುದಕ್ಕೂ ಕ್ಯಾರೆ ಎನ್ನದ ನಟಿ ಸಿನಿಮಾದ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ.