ಖ್ಯಾತ ನಟಿ, ರಾಜಕಾರಣಿ ಖುಷ್ಬೂ ಸುಂದರ್ ಇತ್ತೀಚಿಗೆ ತನ್ನ ತಂದೆಯಿಂದಲೇ ಎದುರಿಸಿದ ದೌರ್ಜನ್ಯದ ಕುರಿತು ಮಾತನಾಡಿದ್ದರು. ಇದೀಗ ಖುಷ್ಭೂ ಈ ರೀತಿ ಮಾತನಾಡಿದ್ದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಪರ ವಿರೋಧದ ಮಾತುಗಳು ಕೇಳಿ ಬಂದಿದೆ. ಈ ಬಗ್ಗೆ ಖುಷ್ಬೂ ಮೌನ ಮುರಿದಿದ್ದಾರೆ.
ತಮ್ಮ 8ನೇ ವಯಸ್ಸಿಗೆ ಖುಷ್ಬೂ ತಮ್ಮ ತಂದೆಯಿಂದಲೇ ದೌರ್ಜನ್ಯ ಎದುರಿಸಿದ್ದರು. ತಾಯಿಗೂ ಹೇಳದೇ ಇರುವಂತಹ ವಾತಾವರಣ ನಿರ್ಮಾಣವಾಗಿತ್ತು. ಇದರ ಬಗ್ಗೆ ಇತ್ತೀಚಿಗೆ ಸಂದರ್ಶನದಲ್ಲಿ ನಟಿ ಬಾಯ್ಬಿಟ್ಟಿದ್ದರು. ಈ ಕುರಿತು ಸಾಕಷ್ಟು ವಿರೋಧ ಬಂದಿರುವ ಬಗ್ಗೆ ನಟಿ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಆಶ್ಚರ್ಯಕರ ಹೇಳಿಕೆಯೇನೂ ನೀಡಿಲ್ಲ. ನಾನು ಪ್ರಾಮಾಣಿಕತೆಯಿಂದ ಈ ಮಾತು ಹೇಳಿದ್ದೇನೆ. ನನ್ನ ಜೊತೆ ಈ ರೀತಿ ಆಯ್ತು, ಅಪರಾಧ ಮಾಡಿದವರು ನಾಚಿಕೆ ಪಡಬೇಕು ಎಂದು ಖುಷ್ಬೂ ಸುಂದರ್ ಅವರು ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿದ್ದಾರೆ.
ಗಟ್ಟಿಯಾಗಿ ನಿಲ್ಲಿ, ಇದೇ ರಸ್ತೆಯ ಅಂತ್ಯ ಎಂದು ಭಾವಿಸಬೇಡಿ ಎಂದು ಎಲ್ಲರಿಗೂ ನಾನು ಸಂದೇಶ ಕಳಿಸಬೇಕಿದೆ. ನಾನು ಈ ಮಾತು ಹೇಳಿರೋದಿಕ್ಕೆ ಇಷ್ಟು ವರ್ಷ ತೆಗೆದುಕೊಂಡೆ ಎಂದರೆ ಮಹಿಳೆಯರು ಈ ಬಗ್ಗೆ ಮಾತನಾಡಲೇ ಬೇಕಾದ ಅಗತ್ಯವಿದೆ. ನನ್ನ ಜೊತೆ ಈ ರೀತಿ ಆಯ್ತು, ಏನೇ ಆಗಲಿ ನಾನು ನನ್ನ ಜರ್ನಿಯನ್ನು ಮುಂದುವರೆಸುತ್ತೇನೆ ಎಂದು ಖುಷ್ಬೂ ಹೇಳಿದ್ದಾರೆ.
ನನ್ನ ಹೆಣ್ಣು ಮಕ್ಕಳಿಗೆ, ಪತಿಗೆ ಈ ವಿಷಯ ಮೊದಲೇ ಗೊತ್ತಿತ್ತು. ಪ್ರತಿ ಸಲ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಆದರೆ ನೀನು ಯಾವ ರೀತಿ ಬಟ್ಟೆ ಹಾಕಿದ್ದೆ? ಏನು ಮಾಡುತ್ತಿದ್ದೆ ಎಂದು ಪ್ರಶ್ನೆ ಮಾಡಲಾಗುತ್ತದೆ. ನನ್ನ ಮೇಲೆ ದೌರ್ಜನ್ಯ ಆದಾಗ ನನಗೆ 8 ವರ್ಷ. ನನಗೆ ಆ ವಯಸ್ಸಿನಲ್ಲಿ ಏನು ಗೊತ್ತಾಗುತ್ತದೆ? ನಾನು ಈಗ ಈ ದೌರ್ಜನ್ಯದ ಬಗ್ಗೆ ಮಾತನಾಡಿದ್ದರಿಂದ ನನ್ನ ಪತಿ, ನೀನು ಈಗ ಇದರಿಂದ ಹೊರಗಡೆ ಬಂದಿದ್ದೀಯಾ ಅಲ್ವಾ, ಈಗ ನೀನು ಓಕೆನಾ ಎಂದು ಕೇಳಿದ್ದರು. ಈ ವೇಳೆ ತಮ್ಮ ಕುಟುಂಬದ ಬೆಂಬಲದ ಬಗ್ಗೆ ಖುಷ್ಬೂ ಮಾತನಾಡಿದ್ದಾರೆ.