ಬಾಲಿವುಡ್ ನಟ ರಣಬೀರ್ ಕಪೂರ್ ಬದುಕಿನಲ್ಲಿ ಸಾಕಷ್ಟು ಬದಲಾವಣೆಗಳು ಆಗಿವೆ. ಮದುವೆ ನಂತರ ಅವರು ಪಕ್ಕಾ ಫ್ಯಾಮಿಲಿ ಮ್ಯಾನ್ ಆಗಿದ್ದಾರೆ. ಮಗಳು ಜನಿಸಿದ ಮೇಲಂತೂ ಅವರು ಕುಟುಂಬಕ್ಕಾಗಿ ಹೆಚ್ಚು ಸಮಯ ಮೀಸಲಿಡುತ್ತಿದ್ದಾರೆ. ಮಗಳ ಮೇಲಿನ ಪ್ರೀತಿಯಿಂದ ಇದೀಗ ರಣಬೀರ್ ಸಿನಿಮಾದ ಕೆಲಸಳಿಂದ ಬ್ರೇಕ್ ಪಡೆದುಕೊಂಡಿದ್ದಾರೆ.
2022ರ ಏಪ್ರಿಲ್ 14ರಂದು ಆಲಿಯಾ ಭಟ್ ಜೊತೆ ರಣಬೀರ್ ಕಪೂರ್ ಮದುವೆ ನೆರವೇರಿದ್ದು, ಅದೇ ವರ್ಷ ನವೆಂಬರ್ನಲ್ಲಿ ಅವರಿಗೆ ಹೆಣ್ಣು ಮಗು ಜನಿಸಿತು. ಮಗಳಿಗೆ ರಾಹಾ ಎಂದು ಹೆಸರು ಇಟ್ಟಿದ್ದಾರೆ. ಈವರೆಗೂ ಮಗಳ ಫೋಟೋವನ್ನು ಈ ದಂಪತಿ ರಿವೀಲ್ ಮಾಡಿಲ್ಲ. ಮುದ್ದಿನ ಮಗಳ ಜೊತೆಗೆ ಹೆಚ್ಚು ಕಾಲ ಕಳೆಯಬೇಕು ಎಂಬ ಆಸೆಯಿಂದ ರಣಬೀರ್ ಹೆಚ್ಚಿನ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿಲ್ಲ. ‘ಅನಿಮಲ್’ ಚಿತ್ರ ತೆರೆಕಂಡ ಬಳಿಕ ಅವರು ನಟನೆಯಿಂದ ಬ್ರೇಕ್ ತೆಗೆದುಕೊಳ್ಳಲು ನಿರ್ಧರಿಸಿದ್ದಾರೆ ಎನ್ನಲಾಗಿತ್ತಿದೆ.
ಹಿಂದಿ ಚಿತ್ರರಂಗದಲ್ಲಿ ರಣಬೀರ್ ಕಪೂರ್ ಅವರಿಗೆ ಸಖತ್ ಬೇಡಿಕೆ ಇದೆ. ಹಲವು ಅವಕಾಶಗಳು ಅವರನ್ನು ಹುಡುಕಿಕೊಂಡು ಬರುತ್ತಿವೆ. ಆದರೆ ಎಲ್ಲವನ್ನೂ ಒಪ್ಪಿಕೊಳ್ಳುವ ಧಾವಂತ ಅವರಿಗೆ ಇಲ್ಲ. ಶ್ರದ್ಧಾ ಕಪೂರ್ ಜೊತೆ ಅವರು ನಟಿಸಿರುವ ‘ತು ಜೂಟಿ ಮೈ ಮಕ್ಕಾರ್’ ಸಿನಿಮಾ ಮಾರ್ಚ್ 8ರಂದು ರಿಲೀಸ್ ಆಗಿ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದೆ. ಆಗಸ್ಟ್ ತಿಂಗಳಲ್ಲಿ ‘ಅನಿಮಲ್’ ಸಿನಿಮಾ ರಿಲೀಸ್ ಆಗಲಿದೆ. ಆ ಬಳಿಕ ರಣಬೀರ್ ಕಪೂರ್ ಫುಲ್ ಬಿಡುವು ಮಾಡಿಕೊಳ್ಳಲಿದ್ದಾರೆ.