ಪ್ರಸ್ತಾವಿತ ಸಂಸತ್ ಸುಧಾರಣೆ ಮಸೂದೆಯ ಬಗ್ಗೆ ತೈವಾನ್ನ ಸಂಸದರ ನಡುವೆ ಮಾತಿನ ಚಕಮಕಿ, ತಳ್ಳಾಟ ನಡೆದು ಪರಸ್ಪರ ಕೈ ಮಿಲಾಯಿಸುವ ಹಂತ ತಲುಪಿದೆ. ಈ ವೇಳೆ ಸಂಸದರೊಬ್ಬರು ಮಸೂದೆಯ ಪ್ರತಿಯನ್ನು ಅಧಿಕಾರಿಗಳ ಕೈಯಿಂದ ಎಳೆದುಕೊಂಡು ಸದನದ ಹೊರಗೆ ಓಡಿಹೋದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಚುನಾಯಿತ ಅಧ್ಯಕ್ಷ ಲಾಯ್ ಚಿಂಗ್ಟೆ ಶಾಸಕಾಂಗ ಬಹುಮತವಿಲ್ಲದೆ ಅಧಿಕಾರ ಸ್ವೀಕರಿಸುವ ಕೆಲವೇ ದಿನಗಳ ಮೊದಲು ತೈವಾನ್ ಸಂಸತ್ ಈ ಗದ್ದಲದ ಸನ್ನಿವೇಶಕ್ಕೆ ಸಾಕ್ಷಿಯಾಗಿದೆ. ಸರಕಾರದ ಮೇಲೆ ನಿಗಾ ವಹಿಸಲು ಸಂಸತ್ಗೆ ಹೆಚ್ಚಿನ ಅಧಿಕಾರವನ್ನು ನೀಡುವುದು ವಿರೋಧ ಪಕ್ಷಗಳ ಉದ್ದೇಶವಾಗಿದೆ.
ಮಸೂದೆಯನ್ನು ಮತಕ್ಕೆ ಹಾಕುವುದಕ್ಕೂ ಮೊದಲೇ ಸದನದ ಹೊರಗೆ ಕೆಲವು ಸಂಸದರ ನಡುವೆ ವಾಗ್ಯುದ್ದ, ನೂಕಾಟ, ಪರಸ್ಪರರನ್ನು ಹಿಡಿದೆಳೆಯುವುದು ನಡೆದಿತ್ತು. ಬಳಿಕ ಸದನದ ಒಳಗೂ ಈ ಸನ್ನಿವೇಶ ಪುನರಾವರ್ತನೆಗೊಂಡಿದ್ದು ಸ್ಪೀಕರ್ ಆಸನದ ಸುತ್ತ ಸೇರಿದ ಕೆಲವು ಸಂಸದರು ಮಸೂದೆಯನ್ನು ವಿರೋಧಿಸಿ ಘೋಷಣೆ ಕೂಗಿದರೆ, ಇನ್ನು ಕೆಲವರು ಮೇಜಿನ ಮೇಲೇರಿ ಘೋಷಣೆ ಕೂಗುತ್ತಿದ್ದವರನ್ನು ಹಿಡಿದೆಳೆದರು. ಈ ಗದ್ದಲದಲ್ಲಿ ಕೆಲವರು ನೆಲಕ್ಕೆ ಬಿದ್ದರು.
ಹಲವಾರು ಸಂಸದರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದು ಅಂತಿಮವಾಗಿ ಮಸೂದೆಯ ಕುರಿತ ಚರ್ಚೆಯನ್ನು ಮೇ 21ಕ್ಕೆ ಮುಂದೂಡಲಾಗಿದೆ.