ಬೆಂಗಳೂರು: ಬಾಣಸವಾಡಿ ಪೊಲೀಸ್ ಠಾಣಾ ವ್ಯಾಪ್ತಿಯ ಲಕ್ಕಮ್ಮ ಲೇಔಟ್ನ ಪಿಜಿಯೊಂದರಲ್ಲಿ ಬ್ರೇಕಪ್ ಮಾಡಿಕೊಂಡಿದಕ್ಕೆ ಪ್ರೀತಿಸಿದ ಹುಡುಗಿ ಮುಖಕ್ಕೆ ಚಾಕುವಿನಿಂದ ಹಲ್ಲೆ ಮಾಡಿರುವ ಘಟನೆ ಜರುಗಿದೆ. 30 ವರ್ಷದ ಯುವತಿ ಮೇಲೆ ಅವಿನಾಶ್ ಎಂಬಾತ ಹಲ್ಲೆ ಮಾಡಿ ಎಸ್ಕೇಪ್ ಆಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಾಗಿ ಬಲೆ ಬೀಸಿದ್ದಾರೆ. ಈ ಘಟನೆ ಮಾರ್ಚ್ 2ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಹಲ್ಲೆಗೊಳಗಾದ ಯುವತಿ ಕಾಲ್ ಸೆಂಟರ್ವೊಂದರಲ್ಲಿ ಕೆಲಸ ಮಾಡಿಕೊಂಡಿದ್ದಳು. ಆರೋಪಿ ಅವಿನಾಶ್ನೊಂದಿಗೆ ಕಳೆದ ಎರಡು ವರ್ಷಗಳ ಹಿಂದೆ ಪರಿಚಯವಾಗಿ ಪ್ರೇಮಕ್ಕೆ ತಿರುಗಿತ್ತು. ನಂತರ ಇಬ್ಬರು ಲಿವಿಂಗ್ ಟೂ ಗೆದರ್ ಸಂಬಂಧ ಹೊಂದಿದ್ದರು.
ಅವಿನಾಶ್ ಪಾರ್ಕ್ವೊಂದರಲ್ಲಿ ಗಾರ್ಡನ್ ಆಗಿ ಕೆಲಸ ಮಾಡುತ್ತಿದ್ದ. ಇತ್ತೀಚೆಗೆ ಇಬ್ಬರ ನಡುವೆ ಕ್ಷುಲ್ಲಕ ಕಾರಣಕ್ಕಾಗಿ ಜಗಳವಾಗಿತ್ತು. ಇದೇ ವಿಚಾರಕ್ಕಾಗಿ ತನ್ನ ಪ್ರಿಯಕರನಿಂದ ಯುವತಿ ಅಂತರ ಕಾಪಾಡಿಕೊಂಡಿದ್ದಳು. ದಿನ ಕಳೆದಂತೆ ಯುವತಿ ಆತನಿಗೆ ಕರೆ ಹಾಗೂ ಮೇಸೆಜ್ ಮಾಡುವುದನ್ನ ನಿಲ್ಲಿಸಿದ್ದಳು. ಇದರಿಂದ ಕೋಪಗೊಂಡ ಅವಿನಾಶ್ ಮಾರ್ಚ್ 2 ರಂದು ಯುವತಿ ಕೆಲಸ ಮಾಡುವ ಸ್ಥಳಕ್ಕೆ ತೆರಳಿ ಪ್ರೀತಿಸುವಂತೆ ದುಂಬಾಲು ಬಿದ್ದಿದ್ದ. ಹೀಗಾಗಿ ಯುವತಿ ಕೋಪದಿಂದ ಅವಿನಾಶ್ಗೆ ನೀನು ನನ್ನೊಂದಿಗೆ ಮಾತನಾಡಬೇಡ.. ನಮ್ಮಿಬ್ಬರ ಲವ್ ಬ್ರೇಕಪ್ ಮಾಡಿಕೊಂಡಿದ್ದೇನೆ ಎಂದಿದ್ದಾಳೆ. ಇದರಿಂದ ಅಕ್ರೋಶಗೊಂಡು ಯುವತಿ ಕೆನ್ನೆಗೆ ಅವಿನಾಶ್ ಚಾಕುವಿನಿಂದ ಹಲ್ಲೆ ಮಾಡಿ ಪರಾರಿಯಾಗಿದ್ದಾನೆ.