ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟಿರುವ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ.
ಈ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಪ್ರಧಾನಿ ಮೋದಿ, ಇರಾನ್ನ ಅಧ್ಯಕ್ಷ ಡಾ. ಸೈಯದ್ ಇಬ್ರಾಹಿಂ ರೈಸಿ ಅವರ ದುರಂತ ನಿಧನದಿಂದ ತೀವ್ರ ದುಃಖ ಮತ್ತು ಆಘಾತವಾಗಿದೆ. ಭಾರತ-ಇರಾನ್ ದ್ವಿಪಕ್ಷೀಯ ಸಂಬಂಧವನ್ನು ಬಲಪಡಿಸಲು ಅವರ ಕೊಡುಗೆ ಯಾವಾಗಲೂ ಸ್ಮರಣೀಯವಾಗಿದೆ. ಅವರ ಕುಟುಂಬಕ್ಕೆ ನನ್ನ ಸಂತಾಪಗಳು. ಇರಾನ್ನ ಜನರು ಈ ದುಃಖದ ಸಮಯದಲ್ಲಿ ಇರಾನ್ನೊಂದಿಗೆ ನಿಂತಿದ್ದಾರೆ ಎಂದಿದ್ದಾರೆ.
ಭಾನುವಾರ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಮತ್ತು ವಿದೇಶಾಂಗ ಸಚಿವರನ್ನು ಹೊತ್ತೊಯ್ಯುತ್ತಿದ್ದ ಹೆಲಿಕಾಪ್ಟರ್ ಅಜರ್ ಬೈಜಾನ್ನ ಗಡಿಗೆ ಭೇಟಿ ನೀಡಿ ಹಿಂದಿರುಗುವ ಮಾರ್ಗದಲ್ಲಿ ಪರ್ವತ ಪ್ರದೇಶವನ್ನು ದಾಟುತ್ತಿದ್ದಾಗ ದಟ್ಟ ಮಂಜಿನಿಂದಾಗಿ ಪತನಗೊಂಡಿತ್ತು.
ಕಡಿದಾದ ಪರ್ವತ ಶ್ರೇಣಿಯ ಕಣಿವೆ ಭಾಗದಲ್ಲಿ ಪ್ರತಿಕೂಲ ವಾತಾವರಣದ ನಡುವೆ ಹಲವು ಗಂಟೆಗಳ ಶೋಧ ಕಾರ್ಯದ ಬಳಿಕ ಡ್ರೋನ್ ಮೂಲಕ ಪತನಗೊಂಡ ಹೆಲಿಕಾಪ್ಟರ್ ಅವಶೇಷ ಪತ್ತೆ ಮಾಡಲಾಗಿತ್ತು. ಹೆಲಿಕಾಪ್ಟರ್ ಸುಟ್ಟು ಭಸ್ಮವಾಗಿದೆ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.
ಅಧ್ಯಕ್ಷ ರೈಸಿ ಹಾಗೂ ವಿದೇಶಾಂಗ ಸಚಿವ ಹೊಸೈನ್ ಸೇರಿದಂತೆ ಹೆಲಿಕಾಪ್ಟರ್ ನಲ್ಲಿದ್ದ ಎಲ್ಲ 9 ಮಂದಿ ಬಲಿಯಾಗಿದ್ದಾರೆ. ಈ ಹೆಲಿಕಾಪ್ಟರ್ ನಲ್ಲಿ ಪೂರ್ವ ಅಜರ್ಬೈಜಾನ್ ಪ್ರಾಂತ್ಯದ ಗವರ್ನರ್ ಮಾಲೆಕ್ ರಹಮತಿ, ಮೂವರು ಇರಾನ್ ಅಧಿಕಾರಿಗಳು ಹಾಗೂ ಭದ್ರತಾ ತಂಡದ ಸದಸ್ಯರಿದ್ದು, ಎಲ್ಲರೂ ಮೃತಪಟ್ಟಿದ್ದಾರೆ ಎಂದು ಇರಾನ್ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.