ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಗೌರವಾರ್ಥ ದೇಶಾದ್ಯಂತ ಇಂದು( ಮಂಗಳವಾರ) ಒಂದು ದಿನದ ಶೋಕಾಚರಣೆಯನ್ನು ಆಚರಿಸಲಾಗುವುದು ಎಂದು ಗೃಹ ಸಚಿವಾಲಯ ತಿಳಿಸಿದೆ.
ಡಾ. ಸೆಯ್ಯದ್ ಇಬ್ರಾಹಿಂ ರೈಸಿ ಮತ್ತು ವಿದೇಶಾಂಗ ಸಚಿವ ಹುಸೇನ್ ಅಮೀರ್-ಅಬ್ದುಲ್ಲಾಹಿಯಾನ್ ಅವರು ಹೆಲಿಕಾಪ್ಟರ್ ಅಪಘಾತದಲ್ಲಿ ನಿಧನರಾಗಿದ್ದಾರೆ. ಮೃತರ ಆತ್ಮಗಳಿಗೆ ಗೌರವ ಸೂಚಕವಾಗಿ ಮಂಗಳವಾರ ಪ್ರತಿನಿತ್ಯ ಹಾರಿಸುವ ಎಲ್ಲಾ ಕಟ್ಟಡಗಳ ಮೇಲೆ ರಾಷ್ಟ್ರಧ್ವಜವನ್ನು ಅರ್ಧ ಎತ್ತರದಲ್ಲಿ ಹಾರಿಸಲಾಗುತ್ತದೆ ಮತ್ತು ಯಾವುದೇ ಅಧಿಕೃತ ಸರ್ಕಾರಿ ಕಾರ್ಯಕ್ರಮಗಳು ಇರುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇಬ್ರಾಹಿಂ ರೈಸಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಭಾನುವಾರದಂದು ದಟ್ಟವಾದ ಮಂಜಿನಿಂದಾಗಿ ಪೂರ್ವ ಅಜೆರ್ಬೈಜಾನ್ ಪ್ರಾಂತ್ಯದ ಪರ್ವತ ಅರಣ್ಯ ಪ್ರದೇಶದಲ್ಲಿ ಪತನಗೊಂಡಿದೆ. ಪ್ರತಿಕೂಲ ಹವಾಮಾನದಿಂದಾಗಿ, ಶೋಧ ಮತ್ತು ರಕ್ಷಣಾ ತಂಡಗಳು ಅಪಘಾತದ ಸ್ಥಳವನ್ನು ತಲುಪಲು ಸಾಕಷ್ಟು ಪ್ರಯಾಸಪಡಬೇಕಾಯಿತು. ಕೊನೆಗೆ ಸೋಮವಾರ ಮುಂಜಾನೆ ಅವಘಡ ನಡೆದ ಸ್ಥಳಕ್ಕೆ ತಲುಪಲು ಸಾಧ್ಯವಾಯಿತು. ಈ ಅಪಘಾತದಲ್ಲಿ ಇರಾನ್ನ ವಿದೇಶಾಂಗ ಸಚಿವರೂ ಕೊನೆಯುಸಿರೆಳೆದಿದ್ದಾರೆ.