ನವದೆಹಲಿ: ಭ್ರಷ್ಟಾಚಾರ ವಿರೋಧಿ ಹೋರಾಟದಿಂದ ಮೇಲೆ ಬಂದ ಆಮ್ ಆದ್ಮಿ ಪಕ್ಷ ಇದೀಗ ಸ್ವತಃ ಭ್ರಷ್ಟಾಚಾರ ಆರೋಪದ ಸುಳಿಯಲ್ಲಿ ಸಿಲುಕಿದೆ. ಮದ್ಯ ಹಗರಣ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಸಲ್ಲಿಸಿದ ಜಾರ್ಜ್ಶೀಟ್ನಲ್ಲಿ ಆಪ್’ಗೆ 2014 ರಿಂದ 2022ರವರೆಗೂ ವಿದೇಶದಿಂದ ಫಂಡಿಂಗ್ ಆಗಿತ್ತು ಎಂದು ತಿಳಿಸಿದೆ.
ವಾಸ್ತವದಲ್ಲಿ ಭಾರತಲ್ಲಿರುವ ರಾಜಕೀಯ ಪಕ್ಷಗಳು ವಿದೇಶಗಳಿಂದ ದೇಣಿಗೆ ಪಡೆಯುವಂತಿಲ್ಲ. ಆದರೆ ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ, ಪ್ರಜಾಪ್ರತಿನಿಧಿ ಕಾಯ್ದೆ ಉಲ್ಲಂಘಿಸಿ ಎಎಪಿ ವಿದೇಶಿ ದೇಣಿಗೆ ಪಡೆದಿದೆ. ಆಮ್ ಆದ್ಮಿ ಪಕ್ಷಕ್ಕೆ ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಸೌದಿ ಅರೇಬಿಯಾ, ಯುಎಇ, ಕುವೈತ್, ಓಮನ್ ಸೇರಿ ಹಲವು ದೇಶಗಳಿಂದ ಒಟ್ಟು 7.8 ಕೋಟಿ ರೂ. ದೇಣಿಗೆ ಹರಿದುಬಂದಿದೆ.
ಆಪ್ನ ಐಡಿಬಿಐ ಬ್ಯಾಂಕ್ ಖಾತೆಗೆ ಈ ವಿದೇಶಿ ಹಣ ಜಮೆಯಾಗಿದೆ. ಒಟ್ಟು 155 ಮಂದಿ 55 ಪಾಸ್ಪೋರ್ಟ್ ನಂಬರ್ ಬಳಸಿ 404 ಬಾರಿ 1.02 ಕೋಟಿ ರೂ. ದೇಣಿಗೆ ನೀಡಿದ್ದಾರೆ. 71 ದಾನಿಗಳು 21 ಮೊಬೈಲ್ ನಂಬರ್ ಬಳಸಿ 256 ಬಾರಿ ಒಟ್ಟು 99,90,870 ರೂ. ದೇಣಿಗೆ ನೀಡಿದ್ದಾರೆ. 75 ದಾನಿಗಳು 15 ಕ್ರೆಡಿಟ್ ಕಾರ್ಡ್ ಮೂಲಕ 148 ಬಾರಿ 19,92,123 ರೂ. ಜಮೆ ಮಾಡಿದ್ದಾರೆ.
ಕೆಲವರು ಆಪ್ ಖಾತೆಗೆ ಹಣ ಜಮೆ ಮಾಡಲು ಒಂದೇ ಪಾಸ್ಪೋರ್ಟ್ ಸಂಖ್ಯೆ, ಕ್ರೆಡಿಟ್ ಕಾರ್ಡ್, ಇಮೇಲ್ ಐಡಿ, ಮೊಬೈಲ್ ಸಂಖ್ಯೆಯನ್ನು ಬಳಸಿರುವುದನ್ನು ಇಡಿ ಪತ್ತೆ ಹಚ್ಚಿದೆ. ದೇಣಿಗೆ ನೀಡಿದವರ ಗುರುತು ಮತ್ತು ರಾಷ್ಟ್ರೀಯತೆಯ ವಿವರಗಳು ಬಹಿರಂಗಗೊಂಡಿಲ್ಲ.
ಬೆಳಕಿಗೆಬಂದಿದ್ದುಹೇಗೆ?
ವಿದೇಶದಿಂದ ಆಪ್ ಪಕ್ಷಕ್ಕೆ ಫಂಡಿಂಗ್ ಆಗುತ್ತಿರುವ ವಿಚಾರ ಪಂಜಾಬ್ನ ಫಾಜಿಲ್ಕಾದಲ್ಲಿ ದಾಖಲಾಗಿದ್ದ ಸ್ಮಗ್ಲಿಂಗ್ ಕೇಸ್ ಮೂಲಕ ಬೆಳಕಿಗೆ ಬಂದಿದೆ. ಪಾಕಿಸ್ತಾನದಿಂದ ಭಾರತಕ್ಕೆ ಮಾದಕವಸ್ತು ಕಳ್ಳಸಾಗಣೆ ಪ್ರಕರಣದಲ್ಲಿ ಎಎಪಿ ಮಾಜಿ , ಹಾಲಿ ಕಾಂಗ್ರೆಸ್ ಶಾಸಕ ಸುಖಪಾಲ್ ಸಿಂಗ್ ಖೈರಾ ಆರೋಪಿಯಾಗಿದ್ದರು. ಈ ಪ್ರಕರಣದ ತನಿಖೆ ವೇಳೆ ಹಲವು ದಾಖಲೆಗಳು ಪತ್ತೆ ಆಗಿದ್ದವು. ಅದರಲ್ಲಿ ಫಾರಿನ್ ಫಂಡಿಂಗ್ ದಾಖಲೆ, ಡೈರಿ ಕೂಡ ಸಿಕ್ಕಿತ್ತು. ಈಗ ಲೋಕಸಭಾ ಚುನಾವಣೆಯ ಸಮಯದಲ್ಲಿ ಈ ವಿಚಾರ ಬಿಜೆಪಿಗೆ ಅಸ್ತ್ರವಾಗಿ ಪರಿಣಮಿಸಿದೆ.