ಹೆಲಿಕಾಪ್ಟರ್ ಅಪಘಾತದಲ್ಲಿ ಮೃತಪಟ್ಟ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಅವರ ಅಂತ್ಯಕ್ರಿಯೆಯಲ್ಲಿ ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಭಾಗವಹಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಅವರು ಬುಧವಾರ ಇರಾನ್ ದೇಶಕ್ಕೆ ತೆರಳುವ ಸಾಧ್ಯತೆ ಇದೆ. ರೈಸಿ ಅವರ ಗೌರವಾರ್ಥವಾಗಿ ಮಂಗಳವಾರ ಭಾರತದಾದ್ಯಂತ ಶೋಕಾಚರಣೆ ಆಚರಿಸಲಾಗುತ್ತಿದೆ.
63 ವರ್ಷದ ಇಬ್ರಾಹಿಂ ರೈಸಿ ಅವರಿದ್ದ ಹೆಲಿಕಾಪ್ಟರ್ ಭಾನುವಾರ ಅಜೆರ್ ಬೈಜಾನ್ ಪ್ರಾಂತ್ಯದ ಗಡಿಯ ಗುಡ್ಡಪ್ರದೇಶಗಳ ವ್ಯಾಪ್ತಿಯಲ್ಲಿ ಅಪಘಾತಕ್ಕೀಡಾಗಿತ್ತು. ಭಾನುವಾರ ಪತನಗೊಂಡ ಹೆಲಿಕಾಪ್ಟರ್ನ ಅವಶೇಷಗಳು ಸೋಮವಾರ ಮುಂಜಾನೆ ಪತ್ತೆಯಾಗಿವೆ. ಅಧ್ಯಕ್ಷರು ಇದ್ದ ಹೆಲಿಕಾಪ್ಟರ್ ಪರ್ವತಕ್ಕೆ ಬಡಿದು, ಚೂರಾಯಿತು ಎಂದು ಸರ್ಕಾರಿ ಮಾಧ್ಯಮ ಹೇಳಿದೆ. ರೈಸಿ ಹಾಗೂ ಇತರರು ಪೂರ್ವ ಅಜರ್ಬೈಜಾನ್ ಪ್ರಾಂತ್ಯದಲ್ಲಿ ಅಣೆಕಟ್ಟು ಯೋಜನೆಯೊಂದನ್ನು ಉದ್ಘಾಟಿಸಿ ಮರಳುತ್ತಿದ್ದಾಗ ಈ ದುರ್ಘಟನೆ ನಡೆದಿದೆ.