ಸ್ಯಾಂಡಲ್ವುಡ್ ಸಿನಿಮಾದಲ್ಲಿ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ನಟಿ ವಿದ್ಯಾ ಗಂಡನಿಂದಲೇ ಭೀಕರವಾಗಿ ಹತ್ಯೆಯಾಗಿದ್ದಾಳೆ. ಧಾರವಾಹಿ, ಸಿನಿಮಾಗಳ ಜೊತೆಗೆ ವಿದ್ಯಾ ರಾಜಕಾರಣಿಯಾಗಿಯೂ ಗುರುತಿಸಿಕೊಂಡಿದ್ದರು. ಆದರೆ ಅದೇ ರಾಜಕಾರಣ ಆಕೆಯ ಬಾಳಿಗೆ ಮುಳುವಾಗಿದೆ ಎನ್ನಲಾಗುತ್ತಿದೆ.
ಮೂಲತಃ ಪಿರಿಯಾಪಟ್ಟಣದ ವಿದ್ಯಾ, ಜೈ ಮಾರುತಿ 800 ಸಿನಿಮಾದ ನಂತರ ಮತ್ತಷ್ಟು ಖ್ಯಾತಿ ಗಳಿಸಿದ್ದ ವಿದ್ಯಾ ಮೈಸೂರು ತಾಲೂಕು ಟಿ.ನರಸೀಪುರ ತಾಲೂಕಿನ ತುರಗನೂರು ಗ್ರಾಮದ ನಂದೀಶ್ ಎನ್ನುವವರನ್ನು ಮದುವೆ ಆಗಿದ್ದರು.
ಪತ್ನಿ ವಿದ್ಯಾಳ ಏಳಿಗೆಯನ್ನು ಕಂಡು ಆರಂಭದ ನಾಲ್ಕೈದು ವರ್ಷ ಸುಖವಾಗಿಯೇ ಸಂಸಾರ ಮಾಡಿಕೊಂಡಿದ್ದ ದಂಪತಿಗೆ ಮುದ್ದಾದ ಎರಡು ಹೆಣ್ಣು ಮಕ್ಕಳು ಕೂಡ ಇದ್ದಾರೆ. ಮದುವೆಯ ಬಳಿಕ ವಿದ್ಯಾ ಸಿನಿಮಾದ ಜೊತೆಗೆ ರಾಜಕೀಯ ಕ್ಷೇತ್ರದಲ್ಲಿಯೂ ಗುರುತಿಸಿಕೊಳ್ಳಲು ಮುಂದಾದರು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ರಾಜ್ಯ ಮತ್ತು ರಾಷ್ಟ್ರ ಮಟ್ಟದ ನಾಯಕರೊಂದಿಗೆ ಉತ್ತಮ ಒಡನಾಟವನ್ನು ಹೊಂದಿದ್ದಳು. ಕಳೆದ ವರ್ಷದ 2023ರಲ್ಲಿ ನಡೆದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕುಟುಂಬಕ್ಕಿಂತ ರಾಜಕೀಯ ಚಟುವಟಿಕೆಗಳಲ್ಲಿಯೇ ವಿದ್ಯಾ ಹೆಚ್ಚಾಗಿ ತೊಡಗಿಸಿಕೊಂಡಿದ್ದರು.
ಭಾರತ್ ಜೋಡೋ ಯಾತ್ರೆಯಲ್ಲಿಯೂ ಕಾಣಿಸಿಕೊಂಡು ರಾಹುಲ್ ಗಾಂಧಿ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಅವರೊಂದಿಗೂ ಕಾಣಿಸಿಕೊಂಡಿದ್ದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಕೆಲಸ ಮಾಡಿದ ವಿದ್ಯಾ ಇತ್ತೀಚೆಗೆ ಮೈಸೂರು ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿಯೂ ಆಗಿದ್ದರು.
ರಾಜಕೀಯ ನಂಟಿನಿಂದ ಮನೆಯಿಂದ ದೂರವೇ ಉಳಿದುಕೊಳ್ಳುತ್ತಿದ್ದ ವಿದ್ಯಾಳ ಮೇಲೆ ಗಂಡ ಅಸಮಾಧಾನ ಹೊರ ಹಾಕಿದ್ದಾನೆ. ಇದರಿಂದ ಇಬ್ಬರ ನಡುವೆ ಮೊದಲು ವೈಮನಸ್ಸು ಬಂದು ಆರಂಭದಲ್ಲಿ ಸಣ್ಣ ಪುಟ್ಟ ಜಗಳವಾಗಿದೆ.ಪ್ರತಿಬಾರಿ ವಿದ್ಯಾ ಮನೆಯಿಂದ ಹೊರಗೆ ಹೋಗುವಾಗಲೂ ಗಂಡ ಮತ್ತು ಅತ್ತೆಯ ಕಿರಿ-ಕಿರಿ ಎದುರಿಸಬೇಕಾಗಿತ್ತು. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಯಾವುದಾದರೂ ಒಂದು ನಿಗಮ ಮಂಡಳಿ ಅಥವಾ ಪ್ರಾಧಿಕಾರದಲ್ಲಿ ಸದಸ್ಯತ್ವ ಸ್ಥಾನ ಪಡೆದು ರಾಜಕೀಯವಾಗಿ ಬೆಳೆಯಬೇಕು ಎಂದು ಕನಸು ಕಟ್ಟಿಕೊಂಡಿದ್ದಳು. ಕೊಳೆಗೇರಿ ಮಂಡಳಿಯ ಸದಸ್ಯರಾಗಲೂ ಭಾರಿ ಪ್ರಯತ್ನ ಮಾಡಿದ್ದರು. ಪತ್ನಿ ವಿದ್ಯಾ ರಾಜಕೀಯವಾಗಿ ಬೆಳೆಯುವುದನ್ನು ನೋಡಿಕೊಂಡಿರಲಾಗದ ಗಂಡ, ತನ್ನ ಹೆಂಡತಿಗೆ ಕರೆ ಮಾಡಿ ಆಗಿಂದಾಗ್ಗೆ ಜಗಳ ಮಾಡುತ್ತಲೇ ಇದ್ದನು. ಇದರಿಂದ ಬೇಸತ್ತ ವಿದ್ಯಾ ತಾಯಿ ಮನೆ ಸೇರಿದ್ದಳೆ.
ವಿದ್ಯಾಳಿಗೆ ಕರೆ ಮಾಡಿದ್ದ ಗಂಡ ನೀನು ಅಪ್ಪ-ಅಮ್ಮನಿಗೆ ಹುಟ್ಟಿದ್ದರೆ ಗಂಡನ ಮನೆಗೆ ಬಾ ಎಂದು ಸವಾಲು ಹಾಕಿದ್ದನು. ಇದರಿಂದ ಕೋಪಗೊಂಡ ವಿದ್ಯಾ, ಅಮ್ಮ ಬೇಡವೆಂದರೂ ತುರಗನೂರಿನ ಗಂಡನ ಮೆನೆಗೆ ಹೋಗಿದ್ದಾಳೆ. ಈ ವೇಳೆ ಗಂಡ ಮತ್ತು ಅತ್ತೆ ಸೇರಿಕೊಂಡು ಹಲ್ಲೆಯನ್ನೂ ಮಾಡಿದ್ದರು. ಇನ್ನು ವಿದ್ಯಾಳ ತಾಯಿ ಬಂದು ಜಗಳ ಬಿಡಿಸಿ ಮಗಳನ್ನು ಕರೆದುಕೊಂಡು ಹೋಗಲು ಪ್ರಯತ್ನ ಮಾಡಿದ್ದಾರೆ. ಆಗ ಇಬ್ಬರ ಜಗಳ ಅತಿರೇಕಕ್ಕೆ ಹೋಗಿದೆ. ಮನೆಯ ಹೊರಗೆ ಬೈಯುತ್ತಾ ನಿಂತಿದ್ದ ವಿದ್ಯಾಳನ್ನು ತಲೆ ಕೂದಲು ಹಿಡಿದು ಮನೆಯೊಳಗೆ ಎಳೆದುಕೊಂಡು ಹೋದ ಅವಳ ಗಂಡ ಮನೆಯೊಳಗೆ ಸುತ್ತಿಗೆಯಿಂದ ಭೀಕರವಾಗಿ ಹಲ್ಲೆ ಮಾಡಿ ಕೊಲೆ ಮಾಡಿದ್ದಾನೆ ಎಂದು ವಿದ್ಯಾಳ ತಾಯಿ ಹೇಳಿದ್ದಾರೆ. ಈ ಸಂಬಂಧಪಟ್ಟಂತೆ ಬನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ನಾಪತ್ತೆಯಾಗಿರುವ ವಿದ್ಯಾ ಪತಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.