ಕಳೆದ ಹತ್ತು ದಿನಗಳ ಹಿಂದೆ ಚಿಕಿತ್ಸೆಗೆಂದು ಭಾರತಕ್ಕೆ ಬಂದಿದ್ದ ಬಾಂಗ್ಲಾದೇಶದ ಸಂಸದ ಅನ್ವರುಲ್ ಅಜೀಂ ಅನಾರ್ ಕೋಲ್ಕತ್ತಾದ ನ್ಯೂಟೌನ್ ಪ್ರದೇಶದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಅನಾರ್ ಕೆಲವು ದಿನಗಳಿಂದ ನಾಪತ್ತೆಯಾಗಿದ್ದರು, ಅವರ ಪತ್ತೆಗೆ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದರು. ಕೋಲ್ಕತ್ತಾದಲ್ಲಿರುವ ಬಾಂಗ್ಲಾದೇಶದ ಡೆಪ್ಯುಟಿ ಹೈಕಮಿಷನ್ನ ಹಿರಿಯ ಅಧಿಕಾರಿಗಳ ಪ್ರಕಾರ, ಹಸೀನಾ ಅವರ ಪಕ್ಷದಿಂದ ಮೂರು ಬಾರಿ ಸಂಸದರಾಗಿದ್ದ ಅನಾರ್ ಕೋಲ್ಕತ್ತಾಗೆ ಆಗಮಿಸಿದ ಒಂದು ದಿನದ ನಂತರ ನಾಪತ್ತೆಯಾಗಿದ್ದರು.
ವೈದ್ಯಕೀಯ ಚಿಕಿತ್ಸೆಗೆಂದು ಕೋಲ್ಕತ್ತಾಗೆ ಬಂದಿದ್ದ ಅನಾರ್ ಬಾರಾನಗರದಲ್ಲಿರುವ ಸ್ನೇಹಿತ ಗೋಪಾಲ್ ಬಿಸ್ವಾಸ್ ಅವರ ಮನೆಯಲ್ಲಿ ಉಳಿದುಕೊಂಡಿದ್ದರು. ಮೇ 13ರಂದು ಯಾರನ್ನೋ ಭೇಟಿಯಾಗಲು ಹೋಗುತ್ತಿದ್ದೇನೆಂದು ಹೊರಟವರು ಮತ್ತೆ ಮನೆಗೆ ಹಿಂದಿರುಗಲಿಲ್ಲ..
ಸಂಸದರು ಚಿನ್ನದ ಆಮದು ಹಾಗೂ ರಫ್ತು ವ್ಯವಹಾರವನ್ನು ಹೊಂದಿದ್ದರು, ಹತ್ಯೆಯಲ್ಲಿ ಅಂತಾರಾಷ್ಟ್ರೀಯ ಕ್ರಿಮಿನಲ್ಗಳ ಕೈವಾಡವಿದೆ ಎನ್ನುವ ಶಂಕೆ ವ್ಯಕ್ತವಾಗಿದೆ. ಪ್ರಾಥಮಿಕ ತನಿಖೆಯಲ್ಲಿ ನಂತರ ಪೊಲೀಸರು ಮಹಿಳೆ ಸೇರಿದಂತೆ ನಾಲ್ವರು ಬಾಂಗ್ಲಾದೇಶಿ ಪ್ರಜೆಗಳನ್ನು ಆರೋಪಿಗಳು ಎಂದು ಗುರುತಿಸಿದ್ದು, ಅವರಲ್ಲಿ ಒಬ್ಬರನ್ನು ಬಂಧಿಸಲಾಗಿದೆ.
ಸಂಸದರ ಹತ್ಯೆಯ ನಂತರ ಅವರು ಬಾಂಗ್ಲಾದೇಶಕ್ಕೆ ಪಲಾಯನ ಮಾಡಿದ್ದಾರೆ ಎಂಬುದನ್ನು ಗುಪ್ತಚರ ವರದಿಗಳು ದೃಢಪಡಿಸಿವೆ. 56 ವರ್ಷದ ಸಂಸದ ಕಳೆದ ಎಂಟು ದಿನಗಳಿಂದ ನಾಪತ್ತೆಯಾಗಿದ್ದರೂ, ಅವರ ಕುಟುಂಬದವರಿಗೆ ಇವರ ಮೊಬೈಲ್ನಿಂದ ದೆಹಲಿಗೆ ತೆರಳುತ್ತಿದ್ದೇನೆ ಎನ್ನುವ ಸಂದೇಶ ಬಂದಿದ್ದು ಆ ಬಳಿಕ ಅನಾರ್ ನಾಪತ್ತೆಯಾಗಿದ್ದರು.