ವಿಶ್ವವಿಖ್ಯಾತ ಕಾನ್ಸ್ ಚಲನಚಿತ್ರೋತ್ಸವದಲ್ಲಿ ಕನ್ನಡ ಜಾನಪದ ಕಿರುಚಿತ್ರ ‘ಸನ್ಫ್ಲವರ್ಸ್ ವರ್ ದಿ ಫಸ್ಟ್ ಒನ್ಸ್ ಟು ನೋ’ ಪ್ರದರ್ಶನಗೊಂಡಿದೆ.
ಶಿವಮೊಗ್ಗ ಮೂಲದವರಾದ ಹಾಗೂ ಸದ್ಯ ಮೈಸೂರಿನಲ್ಲಿ ವಾಸಿಸುತ್ತಿರುವ ಚಿದಾನಂದ ಎಸ್. ನಾಯ್ಕ್ ಅವರು ನಿರ್ದೇಶಿಸಿರುವ 16 ನಿಮಿಷದ ಕಿರುಚಿತ್ರದಲ್ಲಿ ಬಂಜಾರ ಸಮುದಾಯದ ಹಳ್ಳಿಯೊಂದರಲ್ಲಿ ಹುಂಜವನ್ನು ಕದ್ದೊಯ್ದಾಗ ಗ್ರಾಮದಲ್ಲಿ ಬೆಳಕೇ ಮೂಡದೆ ಅಂಧಕಾರದಲ್ಲಿ ವೃದ್ಧೆ ಪರಿತಪಿಸುತ್ತಿರುವ ಕುರಿತು ಚಿತ್ರಿಸಲಾಗಿದೆ. ಈ ನಿಮಿತ್ತ ಚಿತ್ರೋತ್ಸವಕ್ಕಾಗಿ ನಾಯಕ್, ಫೋಟೋಗ್ರಫಿ ನಿರ್ದೇಶಕ ಊರಜ್ ಠಾಕೂರ್, ಸೌಂಡ್ ಡಿಸೈನರ್ ಅಭಿಷೇಕ್ ಕದಂ, ಪ್ರೊಡಕ್ಷನ್ ಡಿಸೈನರ್ ಪ್ರಣವ್ ಖೋತ್ ಕಾನ್ಸ್ಗೆ ಆಗಮಿಸಿದ್ದಾರೆ.
ಈ ಚಿತ್ರವನ್ನು ಚಲನಚಿತ್ರ ಶಾಲಾ ಪ್ರಶಸ್ತಿ ವಿಭಾಗದಲ್ಲಿ ಭಾರತೀಯ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆಯನ್ನು ಪ್ರತಿನಿಧಿಸಿದ್ದು, ಗುರುವಾರ ಈ ವಿಭಾಗದಲ್ಲಿ ಪ್ರದರ್ಶನಗೊಂಡ ಚಿತ್ರಗಳಿಗೆ ಪ್ರಶಸ್ತಿ ಘೋಷಣೆಯಾಗಲಿದೆ.
ಪುಣೆಯ ಫಿಲ್ಮ್ ಆಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ (ಎಫ್ಟಿಐಐ) ವಿದ್ಯಾರ್ಥಿಯು ನಿರ್ಮಿಸಿದ ಈ ಕಿರುಚಿತ್ರವು ಕಾನ್ಸ್ ಚಿತ್ರೋತ್ಸವದ ಲಾ ಸಿನೆಫ್ ವಿಭಾಗಕ್ಕೆ ಆಯ್ಕೆಗೊಂಡಿತ್ತು. ಒಟ್ಟು 2,263 ಕಿರುಚಿತ್ರಗಳು ಈ ವಿಭಾಗದಲ್ಲಿ ಸ್ಪರ್ಧಿಸಲು ಅರ್ಜಿ ಸಲ್ಲಿಸಿದ್ದವು. ಇವುಗಳಲ್ಲಿ ಹದಿನೆಂಟು ಕಿರುಚಿತ್ರಗಳು ಅಂತಿಮ ಸುತ್ತಿಗೆ ಆಯ್ಕೆಯಾಗಿತ್ತು. ಅಜ್ಜಿ ಹುಂಜ ಕದ್ದ ಕಥೆಯ ಈ ಕಿರುಚಿತ್ರವೂ ಆಯ್ಕೆಯಾಗಿತ್ತು. ವಿಶೇಷವೆಂದರೆ, ಭಾರತದಿಂದ ಆಯ್ಕೆಯಾದ ಒಂದೇ ಒಂದು ಕಿರುಚಿತ್ರ ಇದಾಗಿದೆ.
ಚಿದಾನಂದ್ ಎಸ್ ನಾಯ್ಕ್ ಎಂಬಿಬಿಎಸ್ ಪದವಿ ಪಡೆದಿದ್ದಾರೆ. ಒಂದಿಷ್ಟು ಸಮಯ ವೈದ್ಯಕೀಯ ವೃತಿ ಮಾಡಿದ ಬಳಿಕ ಇವರು ಸಿನಿಮಾ ನಿರ್ಮಾಣದ ಕಡೆಗೆ ಆಕರ್ಷಿತರಾದರು. “ನಾನು ಈ ಆಯ್ಕೆಯನ್ನು ಮಾಡಿದಾಗ ನನ್ನ ಮನೆಯವರು ತುಂಬಾ ಅಸಮಧಾನಗೊಂಡಿದ್ದರು. ಐದು ವರ್ಷಗಳ ಬಳಿಕ ಅವರ ಬೆಂಬಲದದೊಂದಿಗೆ ಇಲ್ಲಿದ್ದೇನೆ” ಎಂದು ಚಿದಾನಂದ್ ನಾಯ್ಕ್ ಹೇಳದಿದಾರೆ.