ಬಾಲಿವುಡ್ ನ ಖ್ಯಾತ ನಟ ನವಾಜುದ್ದೀಣ್ ಸಿದ್ದಿಖಿ ಖಾಸಗಿ ಜೀವನ ಇತ್ತೀಚೆಗೆ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಾಗುತ್ತಲೆ ಇದೆ. ಇತ್ತೀಚೆಗೆ ಸಿದ್ದಿಕಿ ವಿರುದ್ಧಿ ಆತನ ಪತ್ನಿ ಕಿಡಿ ಕಾರಿದ್ದರು. ಇದಿಗ ನವಾಜುದ್ಧೀನ್ ಸಿದ್ಧಿಖಿ ಅವರ ಸಹೋದರನನ್ನು ಪೊಲೀಸರು ಬಂಧಿಸಿದ್ದಾರೆ.
ನವಾಜುದ್ಧೀನ್ ಸಿದ್ಧಿಖಿ ಅವರ ಅಣ್ಣ ಅಯಾಜುದ್ಧೀನ್ ವಿರುದ್ಧ ನಕಲಿ ದಾಖಲೆಗಳನ್ನು ಸೃಷ್ಟಿಸಿ ಮೋಸ ಮಾಡಲು ಯತ್ನಿಸಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದ್ದು ಈ ಹಿನ್ನೆಲೆಯಲ್ಲಿ ಅಯಾಜುದ್ಧೀನ್ ಸಿದ್ಧಿಖಿಯನ್ನು ಉತ್ತರ ಪ್ರದೇಶದ ಮುಝಫರ್ನಗರ ಜಿಲ್ಲೆಯ ಬುಧಾನಾ ಪೊಲೀಸ್ ಠಾಣೆಯ ಸಿಬ್ಬಂದಿ ಬಂಧಿಸಿದ್ದಾರೆ. ಅಯಾಜುದ್ಧೀನ್, ಸ್ಥಳೀಯ ನ್ಯಾಯಾಲಯಕ್ಕೆ, ನಕಲಿ ಜಿಲ್ಲಾಧಿಕಾರಿಗಳ ಆದೇಶದ ಪ್ರತಿಯೊಂದನ್ನು ನೀಡಿದ್ದಾರೆ ಎನ್ನಲಾಗಿದೆ.
ಅಯಾಜುದ್ಧೀನ್ ಹಾಗೂ ಇಕ್ಬಾಲ್ ಎಂಬುವರ ನಡುವೆ ಜಮೀನು ಕುರಿತಾದಂತೆ ವ್ಯಾಜ್ಯ ಬಹಳ ಸಮಯದಿಂದಲೂ ನಡೆಯುತ್ತಿದ್ದು, ಇತ್ತೀಚೆಗೆ ಜಿಲ್ಲಾಧಿಕಾರಿಗಳು ಜಮೀನಿನ ಕುರಿತಾಗಿ ಮಾಡಿದ್ದಾರೆ ಎನ್ನಲಾದ ಆದೇಶವೊಂದನ್ನು ನವಾಜುದ್ಧೀನ್ ಸಹೋದರ ಅಯಾಜುದ್ಧೀನ್ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಆದರೆ ಇದು ನಕಲಿ ಎನ್ನಲಾಗುತ್ತಿದ್ದು, ಇದೇ ಕಾರಣಕ್ಕೆ ಪೊಲೀಸರು ಅಯಾಜುದ್ಧೀನ್ ಅನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿದ್ದಾರೆ.
ಮಾರ್ಚ್ 2024ರಂದು ಜಿಲ್ಲಾಧಿಕಾರಿಗಳೇ ಅಯಾಜುದ್ಧೀನ್ ವಿರುದ್ಧ ಪ್ರಕರಣ ದಾಖಲಿಸಿ, ತಮ್ಮ ದಾಖಲೆಯನ್ನು ನಕಲಿ ಮಾಡಿದ ಆರೋಪ ಹೊರಿಸಿದ್ದರು. ಐಪಿಸಿ ಸೆಕ್ಷನ್ಗಳಾದ 420, 467, 468, 471 ಗಳನ್ನು ಅಯಾಜುದ್ಧೀನ್ ಮೇಲೆ ಹೊರಿಸಲಾಗಿದೆ. 2018ರಲ್ಲಿಯೂ ಸಹ ಅಯಾಜುದ್ಧೀನ್ ಮೇಲೆ ಪ್ರಕರಣ ದಾಖಲಾಗಿತ್ತು, ಆಗ ಅಯಾಜುದ್ಧೀನ್, ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡುವ ಚಿತ್ರವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.
ನವಾಜುದ್ದೀನ್ ಕಿರಿಯ ಸಹೋದರ ಶಮಾಸ್ ವಿರುದ್ಧವೂ ಸಹ ಈ ಹಿಂದೆ ಪ್ರಕರಣ ದಾಖಲಾಗಿತ್ತು. ನವಾಜುದ್ಧೀನ್ರ ಪತ್ನಿ ಆಲಿಯಾ, ನವಾಜುದ್ಧೀನ್ರ ಕಿರಿಯ ಸಹೋದರ ಶಮಾಸ್ ತಮ್ಮ ಮೇಲೆ ಹಲ್ಲೆ ಮಾಡಿರುವುದಾಗಿ ದೂರು ದಾಖಲಿಸಿದ್ದರು. ನವಾಜುದ್ಧೀನ್ ತಾಯಿಯ ವಿರುದ್ಧವೂ ಸಹ ದೂರು ದಾಖಲಾಗಿತ್ತು.