ಕಳೆದ ಭಾನುವಾರ ಸಂಭವಿಸಿದ ಹೆಲಿಕಾಪ್ಟರ್ ದುರಂತದಲ್ಲಿ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಮತ್ತು ಅವರ ಸಹೋದ್ಯೋಗಿಗಳ ಮೃತಪಟ್ಟಿದ್ದರು. ಅಧ್ಯಕ್ಷರ ಸಾವಿಗೆ ಕಾರಣವಾದ ಹೆಲಿಕಾಪ್ಟರ್ ಅಪಘಾತದ ಕಾರಣಗಳ ಬಗೆಗಿನ ಮೊದಲ ವರದಿಯನ್ನು ಇರಾನ್ನ ಸಶಸ್ತ್ರ ಪಡೆಗಳ ಜನರಲ್ ಸ್ಟಾಫ್ ಬಿಡುಗಡೆ ಮಾಡಿದ್ದಾರೆ.
ಅಪಘಾತದ ಕಾರಣಗಳ ಪರಿಶೀಲನೆಗಾಗಿ ನಿಪುಣರು ಮತ್ತು ತಂತ್ರಜ್ಞರನ್ನು ಒಳಗೊಂಡ ಹಿರಿಯ ತನಿಖಾ ಸಮಿತಿಯನ್ನು ನೇಮಿಸಲಾಗಿತ್ತು. ಸಮಿತಿಯು ಸೋಮವಾರ ಬೆಳಗ್ಗೆ ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದೆ ಎಂದು ಇರಾನ್ನ ಸಶಸ್ತ್ರ ಪಡೆಗಳ ಮುಖ್ಯಸ್ಥರು ಹೇಳಿದ್ದಾರೆ ಎಂದು ತಸ್ನಿಮ್ ಸುದ್ದಿ ಸಂಸ್ಥೆ ಶುಕ್ರವಾರ ತಿಳಿಸಿದೆ.
ವರದಿಯ ಪ್ರಕಾರ- ಹೆಲಿಕಾಪ್ಟರ್ ದಾರಿಯುದ್ದಕ್ಕೂ ತನ್ನ ಪೂರ್ವನಿರ್ಧರಿತ ಮಾರ್ಗದಲ್ಲಿಯೇ ಸಾಗಿತ್ತು ಮತ್ತು ನಿಗದಿತ ಹಾರಾಟದ ಮಾರ್ಗದಿಂದ ವಿಮುಖವಾಗಿರಲಿಲ್ಲ. ಅಪಘಾತ ಸಂಭವಿಸುವ ಸುಮಾರು ಒಂದೂವರೆ ನಿಮಿಷ ಮೊದಲು, ಅಪಘಾತಕ್ಕೀಡಾದ ಹೆಲಿಕಾಪ್ಟರ್ನ ಪೈಲಟ್, ಅಧ್ಯಕ್ಷರ ಬೆಂಗಾವಲು ಪಡೆಯ ಇತರ ಎರಡು ಹೆಲಿಕಾಪ್ಟರ್ಗಳನ್ನು ಸಂಪರ್ಕಿಸಿದ್ದರು ಎಂದು ವರದಿ ತಿಳಿಸಿದೆ.
ಅಪಘಾತಕ್ಕೀಡಾದ ಹೆಲಿಕಾಪ್ಟರ್ನ ಅವಶೇಷಗಳಲ್ಲಿ ಗುಂಡು ಅಥವಾ ಆ ರೀತಿಯ ವಸ್ತುಗಳ ಯಾವುದೇ ಕುರುಹು ಪತ್ತೆಯಾಗಿಲ್ಲ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ. ಪರ್ವತಕ್ಕೆ ಅಪ್ಪಳಿಸಿದ ನಂತರ ಹೆಲಿಕಾಪ್ಟರ್ಗೆ ಬೆಂಕಿ ಹೊತ್ತಿಕೊಂಡಿತು ಎಂದು ವರದಿ ಹೇಳಿದೆ.
“ದಟ್ಟವಾದ ಮಂಜು ಮತ್ತು ಅತ್ಯಂತ ಕಡಿಮೆ ತಾಪಮಾನಗಳ ಕಾರಣದಿಂದ ಅಪಘಾತ ಸಂಭವಿಸಿದ ದುರ್ಗಮ ಪ್ರದೇಶದಲ್ಲಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗೆ ತೀವ್ರ ಅಡ್ಡಿಯಾಯಿತು. ಹೀಗಾಗಿ ಇಡೀ ರಾತ್ರಿ ಶೋಧ ಕಾರ್ಯಾಚರಣೆ ನಡೆಸಬೇಕಾಯಿತು. ಕೊನೆಗೆ ಸ್ಥಳೀಯ ಸಮಯ ಸೋಮವಾರ ಬೆಳಗ್ಗೆ 5 ಗಂಟೆಗೆ ಡ್ರೋನ್ಗಳ ಸಹಾಯದಿಂದ ಘಟನೆಯ ನಿಖರವಾದ ಸ್ಥಳವನ್ನು ಗುರುತಿಸಲು ಸಾಧ್ಯವಾಯಿತು” ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ವಾಚ್ ಟವರ್ ಮತ್ತು ಹೆಲಿಕಾಪ್ಟರ್ನ ಸಿಬ್ಬಂದಿಯ ಮಧ್ಯೆ ನಡೆದ ಸಂಭಾಷಣೆಯಲ್ಲಿ ಯಾವುದೇ ಅನುಮಾನಾಸ್ಪದ ಅಂಶ ಕಂಡುಬಂದಿಲ್ಲ. ಮತ್ತಷ್ಟು ತನಿಖೆಯ ನಂತರ ಹೆಚ್ಚಿನ ವಿವರಗಳನ್ನು ನೀಡಲಾಗುವುದು ಎಂದು ಹೇಳಿದೆ.