‘ಕನಸುಗಾರ’ನ ಜೊತೆಗೆ ಮೇಘನಾ ಗಾಂವ್ಕರ್ ಜಡ್ಜ್ ಮೆಂಟ್ ಕೊಟ್ರಾ..?
ಕನ್ನಡ ಚಿತ್ರರಂಗದಲ್ಲಿ ಇಲ್ಲಿಯವರೆಗೆ ಲವ್, ರೊಮ್ಯಾನ್ಸ್ ಮತ್ತು ಕಾಮಿಡಿ ಶೈಲಿಯ ಸಿನಿಮಾಗಳಲ್ಲೇ ಹೆಚ್ಚಾಗಿ ಕಾಣಿಸಿಕೊಂಡಿದ್ದ ನಟಿ ಮೇಘನಾ ಗಾಂವ್ಕರ್, ಈ ಬಾರಿ ಲೀಗಲ್-ಥ್ರಿಲ್ಲರ್ ಶೈಲಿಯ ʼದ ಜಡ್ಜ್ ಮೆಂಟ್ʼ ಸಿನಿಮಾದಲ್ಲಿ ಹೊಸಥರದ ಪಾತ್ರದ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ʼದ ಜಡ್ಜ್ ಮೆಂಟ್ʼ ಸಿನಿಮಾ ಪೋಸ್ಟರ್, ಫಸ್ಟ್ ಲುಕ್, ಟೀಸರ್ ಮತ್ತು ಟ್ರೇಲರ್ಗಳಲ್ಲಿ ನಟಿ ಮೇಘನಾ ಗಾಂವ್ಕರ್ ಪಾತ್ರ ಗಮನ ಸೆಳೆಯುತ್ತಿದ್ದು, ತಮ್ಮ ಹೊಸ ಸಿನಿಮಾ ಮತ್ತು ಹೊಸ ಪಾತ್ರದ ಬಗ್ಗೆ ಮೇಘನಾ ಗಾಂವ್ಕರ್ ಒಂದಷ್ಟು ಮಾತನಾಡಿದ್ದಾರೆ.
ʼದ ಜಡ್ಜ್ ಮೆಂಟ್ʼ ಸಿನಿಮಾ ಒಪ್ಪಿಕೊಳ್ಳಲು ಕಾರಣ?
ಇಲ್ಲಿಯವರೆಗೆ ನಾನು ಮಾಡಿರುವ ಪಾತ್ರಗಳದ್ದು, ಒಂದು ತೂಕವಾದರೆ, ʼದ ಜಡ್ಜ್ ಮೆಂಟ್ʼ ಸಿನಿಮಾದ ಪಾತ್ರದ್ದು ಇನ್ನೊಂದು ತೂಕ. ನಾನು ಇಲ್ಲಿಯವರೆಗೆ ಮಾಡಿರುವ ಪಾತ್ರಗಳಿಗಿಂತ ವಿಭಿನ್ನವಾದ ಪಾತ್ರ ʼದ ಜಡ್ಜ್ ಮೆಂಟ್ʼ ಸಿನಿಮಾದಲ್ಲಿದೆ. ಸಿನಿಮಾದ ಕಥೆ, ಪಾತ್ರ, ಕಲಾವಿದರು ಮತ್ತು ತಂತ್ರಜ್ಞರ ತಂಡ ಎಲ್ಲವೂ ಇಷ್ಟವಾಯಿತು. ಹೀಗಾಗಿ ಖುಷಿಯಿಂದ ಈ ಸಿನಿಮಾ ಒಪ್ಪಿಕೊಂಡೆ.
ಮೊದಲ ಬಾರಿಗೆ ರವಿಚಂದ್ರನ್ ಅವರೊಂದಿಗೆ ಅಭಿನಯಿಸಿದ್ದು ಹೇಗಿತ್ತು?
ಮೊದಲ ಬಾರಿಗೆ ರವಿಚಂದ್ರನ್ ಅವರಂಥ ಲೆಜೆಂಡರಿ ಸ್ಟಾರ್ ಜೊತೆ ಅಭಿನಯಿಸುವ ಅವಕಾಶ ಸಿಕ್ಕಿರುವುದಕ್ಕೆ ತುಂಬ ಖುಷಿಯಿದೆ. ನಾನು ಈ ಸಿನಿಮಾ ಒಪ್ಪಿಕೊಳ್ಳಲು ಇದೂ ಕೂಡ ಒಂದು ಕಾರಣ. ಕೆಲ ವರ್ಷಗಳ ಹಿಂದೆ ರವಿಚಂದ್ರನ್ ಅವರೊಂದಿಗೆ ಅಭಿನಯಿಸುವ ಅವಕಾಶ ಬಂದಿದ್ದರೂ, ಕಾರಣಾಂತರಗಳಿಂದ ಅದು ಸಾಧ್ಯವಾಗಿರಲಿಲ್ಲ. ʼದ ಜಡ್ಜ್ ಮೆಂಟ್ʼ ಸಿನಿಮಾದಲ್ಲಿ ಅದು ನೆರವೇರಿದೆ. ರವಿಚಂದ್ರನ್ ಅವರೊಂದಿಗೆ ಕೆಲಸ ಮಾಡಿದ್ದು, ನಿಜಕ್ಕೂ ಖುಷಿಕೊಟ್ಟಿದೆ.
ಸಿನಿಮಾದಲ್ಲಿ ನಿಮ್ಮ ಪಾತ್ರಕ್ಕೆ ತಯಾರಿ ಹೇಗಿತ್ತು?
ಯಾವುದೇ ಸಿನಿಮಾದ ಪಾತ್ರವಾದರೂ, ಅದಕ್ಕೆ ಅದರದ್ದೇ ಆದ ಒಂದಷ್ಟು ತಯಾರಿ ಇದ್ದೇ ಇರುತ್ತದೆ. ಈ ಸಿನಿಮಾದಲ್ಲಿ ನನ್ನ ಪಾತ್ರ ತುಂಬ ಗಂಭೀರವಾಗಿದೆ. ಮನಸ್ಸಿನ ಭಾವನೆಗಳನ್ನು ಮಾತಿಗಿಂತ ಹೆಚ್ಚಾಗಿ ಭಾವನೆಗಳ ಮೂಲಕವೇ ತೋರಿಸಬೇಕಾಗಿತ್ತು. ಕಡಿಮೆ ಡೈಲಾಗ್ಸ್ ನಲ್ಲಿ ಹೆಚ್ಚು ಅಭಿನಯಕ್ಕೆ ಸ್ಕೋಪ್ ಇರುವಂಥ ಪಾತ್ರ ಇದಾಗಿತ್ತು. ನಿರ್ದೇಶಕ ಗುರುರಾಜ್ ಕುಲಕರ್ಣಿ ಸಿನಿಮಾದ ಪ್ರತಿ ಪಾತ್ರಗಳು, ಸನ್ನಿವೇಶಗಳು ಹೇಗೆ ಬರಬೇಕು ಎಂಬುದನ್ನು ಕಲಾವಿದರಿಗೆ ಅರ್ಥೈಸಿ ಅವರಿಂದ ಅಭಿನಯ ತೆಗೆಸುತ್ತಿದ್ದರು.
ನಿರ್ದೇಶಕರು ಮತ್ತು ಚಿತ್ರತಂಡದ ಬಗ್ಗೆ ಏನು ಹೇಳುವಿರಿ?
ʼದ ಜಡ್ಜ್ ಮೆಂಟ್ʼ ಸಿನಿಮಾದ ನಿರ್ದೇಶಕ ಗುರುರಾಜ್ ಮೂಲತಃ ಸಾಫ್ಟ್ವೇರ್ ಹಿನ್ನೆಲೆಯಿಂದ ಸಿನಿಮಾಕ್ಕೆ ಬಂದವರು. ಸಾಕಷ್ಟು ವಿಷಯಗಳ ಬಗ್ಗೆ ಅವರಿಗೆ ಆಳವಾದ ಜ್ಞಾನವಿದೆ. . ಬಿಗ್ ಕಾಸ್ಟಿಂಗ್, ಬಿಗ್ ಬಜೆಟ್ ಇಟ್ಟುಕೊಂಡು ಅಂದುಕೊಂಡಂತೆ, ಪ್ಲಾನ್ ಪ್ರಕಾರ ಇಡೀ ಸಿನಿಮಾವನ್ನು ನಿರ್ದೇಶಕರು ಮತ್ತು ಚಿತ್ರತಂಡ ಅಚ್ಚುಕಟ್ಟಾಗಿ ತೆರೆಮೇಲೆ ತರುತ್ತಿದೆ. ತುಂಬ ಪ್ಯಾಶನೇಟ್ ಆಗಿ ಎಲ್ಲರೂ ಸೇರಿ ಒಂದೊಳ್ಳೆ ಸಿನಿಮಾ ಮಾಡಿದ್ದೇವೆ.
ʼದ ಜಡ್ಜ್ ಮೆಂಟ್ʼ ಮೇಲೆ ನಿಮ್ಮ ನಿರೀಕ್ಷೆ ಹೇಗಿದೆ?
ನನ್ನ ಪ್ರಕಾರ, ʼದ ಜಡ್ಜ್ ಮೆಂಟ್ʼ ಮಾಮೂಲಿ ಎಂಟರ್ಟೈನ್ಮೆಂಟ್ ಸಿನಿಮಾಗಳ ಸಾಲಿಗೆ ಅಥವಾ ಯಾವುದೋ ಒಂದು ವರ್ಗಕ್ಕೆ ಸೇರುವ ಸಿನಿಮಾವಲ್ಲ. ಕನ್ನಡದ ಮಟ್ಟಿಗೆ ತುಂಬ ಅಪರೂಪವಾಗಿರುವ ಲೀಗಲ್-ಥ್ರಿಲ್ಲರ್ ಶೈಲಿಯಲ್ಲಿ ಸಿನಿಮಾ ಬಂದಿದೆ. ಇದರಲ್ಲೊಂದು ಒಳ್ಳೆಯ ವಿಷಯವಿದೆ. ಅದನ್ನು ಮನಮುಟ್ಟುವಂತೆ ನಿರ್ದೇಶಕರು ತೆರೆಮೇಲೆ ಹೇಳಿದ್ದಾರೆ. ಆಡಿಯನ್ಸ್ ಗೆ ಖಂಡಿತವಾಗಿಯೂ ʼದ ಜಡ್ಜ್ ಮೆಂಟ್ʼ ಒಂದು ಒಳ್ಳೆಯ ಅನುಭವ ಕೊಟ್ಟು, ಇಷ್ಟವಾಗಲಿದೆ ಎಂಬ ವಿಶ್ವಾಸವಿದೆ.