ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಹೊರಬಂದಿದ್ದು ಏಪ್ರಿಲ್ 21ರಂದು. ಅವರು ವಿದೇಶಕ್ಕೆ ಹೋಗಿದ್ದು ಏ.27ರಂದು. ಹಾಗಾದರೆ ಅಲ್ಲಿಯವರೆಗೆ ಇವರೇನು ಕತ್ತೆ ಕಾಯುತ್ತಿದ್ದರಾ? ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಿಡಿಕಾರಿದರು. ನಗರದಲ್ಲಿ ಮಾತನಾಡಿದ ಅವರು, ಡಿಪ್ಲೋಮ್ಯಾಟ್ ಪಾಸ್ಪೋರ್ಟ್ ರದ್ದತಿಗೆ ನ್ಯಾಯಾಲಯದಲ್ಲಿ ಕೇಸ್ ಫೈಲ್ ಮಾಡಲಾಗಿದೆ.
ಹೊರದೇಶಕ್ಕೆ ಹೋದವರನ್ನು ತರುವುದಕ್ಕೆ ಅದರದೇ ಆದ ಪ್ರೊಸೆಸ್ ಇದೆ. ಭಾರತ ಸರಕಾರ ಕಾನೂನು ಪ್ರಕಾರ ಏನು ಮಾಡಬೇಕೋ ಮಾಡುತ್ತಿದೆ. ರಾಜ್ಯ ಸರಕಾರಕ್ಕೆ ಸಹಕಾರ ನೀಡಲು ತಯಾರಿದೆ. ಇವರು ಪತ್ರ ಬರೆದ ತಕ್ಷಣ ಪಾಸ್ಪೋರ್ಟ್ ರದ್ದು ಆಗಬೇಕು ಅಂತಲ್ಲ, ಇದನ್ನು ಬಿಜೆಪಿ ಮೇಲೆ ಹಾಕುವ ಪ್ರಯತ್ನ ಮಾಡುತ್ತಿದ್ದಾರೆ ಎಂದರು.
ಇನ್ನೂ ನಾನು ಕೇಳುವ ಪ್ರಶ್ನೆಗೆ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಜಿ.ಪರಮೇಶ್ವರ್ ಅವರಿಗೆ ಇದುವರೆಗೂ ಉತ್ತರ ಕೊಡಲು ಆಗುತ್ತಿಲ್ಲ. ಒಕ್ಕಲಿಗ ಸಮುದಾಯದ ಓಟ್ ಮೇಲೆ ಕಣ್ಣಿಟ್ಟು ಅಲ್ಲಿ ಚುನಾವಣೆ ಮುಗಿಯುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ.ಇದು ಅತ್ಯಂತ ಗಂಭೀರ ಪ್ರಕರಣ. ಪ್ರಜ್ವಲ್ ವಿಚಾರಣೆ ಎದುರಿಸಲೇಬೇಕು. ಅವರು ತಪ್ಪು ಮಾಡಿದ್ದೇ ಆಗಿದ್ದರೆ ಕಠಿಣ ಕ್ರಮ ಆಗಲೇಬೇಕು ಎಂದು ಪ್ರಹ್ಲಾದ್ ಜೋಶಿ ಹೇಳಿದರು.