ಲೋಕಸಭಾ ಚುನಾವಣೆ ಫಲಿತಾಂಶದ ನಂತರ ತಾಲ್ಲೂಕು, ಜಿಲ್ಲಾ ಪಂಚಾಯತಿಗಳ ಚುನಾವಣೆ ಹಾಗೂ ಬಿಬಿಎಂಪಿ ಚುನಾವಣೆ ಕೂಡ ನಡೆಸಲಾಗುವುದು. ಸರ್ಕಾರ ಚುನಾವಣೆ ನಡೆಸಲು ಸಿದ್ಧ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಇಂದು ಮೈಸೂರಿನ ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದರು.
ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗ ಉಚ್ಚ ನ್ಯಾಯಾಲಯಕ್ಕೆ ಹೋಗಲಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಅವರು ಮೇಲಿನಂತೆ ಪ್ರತಿಕ್ರಿಯೆ ನೀಡಿದರು.
ಕ್ಷೇತ್ರ ಪುನರ್ವಿಗಂಡನೆಗೆ ಜನವರಿವರೆಗೆ ಗಡುವು ಇದ್ದುದರ ಬಗ್ಗೆ ಮಾತನಾಡಿ ಈ ಬಗ್ಗೆ ಅಡ್ವೋಕೇಟ್ ಜನರಲ್ ಜೊತೆ ಚರ್ಚೆ ಮಾಡಿ ಅವರು ಕಾನೂನು ಪ್ರಕಾರ ಏನು ಮಾಡಬೇಕೆಂದು ಹೇಳುತ್ತಾರೋ ಹಾಗೆ ಮಾಡುತ್ತೇವೆ. ಪುನರ್ ವಿಂಗಡಣೆಯಾದ ಮೇಲೆ ಮೀಸಲಾತಿ ಮಾಡಲೇಬೇಕು ಎಂದರು.
ಹೈಕಮಾಂಡ್ ನಿರ್ಧಾರದ ಬಗ್ಗೆ ತಿಳಿದಿಲ್ಲ
ಈ ಬಾರಿ ಡಾ. ಯತೀಂದ್ರ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿಸಲು ಒತ್ತಡವಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ ಹೈ ಕಮಾಂಡ್ ನವರು ಯತೀಂದ್ರ ಅವರನ್ನು ಎಂ.ಎಲ್.ಸಿ ಮಾಡುವುದಾಗಿ ಹೇಳಿದ್ದರು. ಏನು ಮಾಡುತ್ತಾರೆ ಎಂದು ನನಗೆ ಗೊತ್ತಿಲ್ಲ. ಹೋದ ನಾನು ಬಾರಿ ವರುಣಾದಲ್ಲಿಯೇ ನಿಲ್ಲಬೇಕು ಎಂದು ತೀರ್ಮಾನವಾದಾಗ ಕ್ಷೇತ್ರ ಬಿಟ್ಟುಕೊಡಲು ಸೂಚಿಸಿದ್ದರು. ಈಗ ಏನು ಮಾಡುತ್ತಾರೆ ಎಂದು ತಿಳಿದಿಲ್ಲ ಎಂದರು.
ಪ್ರಕರಣ ದುರ್ಬಲಗೊಳಿಸಲು ಹೇಳಿಕೆ
ಪ್ರಜ್ವಲ್ ರೇವಣ್ಣ ಅವರ ಪ್ರಕರಣದಲ್ಲಿ ಡಿ.ಕೆ.ಶಿವಕುಮಾರ್ ಅವರ ಆಡಿಯೋ ಇರುವುದರಿಂದ ಅವರನ್ನೇ ವಿಚಾರಣೆ ಮಾಡಬೇಕೆಂದು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಆಗ್ರಹ ಮಾಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ಅವರ ಅಣ್ಣನ ಮಗ ಅತ್ಯಾಚಾರ ಪ್ರಕರಣದಲ್ಲಿ ಆರೋಪಿ. ಅತ್ಯಾಚಾರದ ವಿಡಿಯೊ ಹರಿದಾಡಿತು ಎನ್ನುವುದಕ್ಕಿಂತ, ಅತ್ಯಾಚಾರ ಘೋರ ಅಪರಾಧ. ಅತ್ಯಾಚಾರದ ಸಂಗತಿಯನ್ನು ದುರ್ಬಲಗೊಳಿಸಲು ಡಿ.ಕೆ. ಶಿವಕುಮಾರ್ ಹಾಗೂ ಮತ್ತೊಬ್ಬರ ಮೇಲೆ ಹೇಳುತ್ತಿದ್ದಾರೆ. ಅವರು ಈ ನೆಲದ ಕಾನೂನಿಗೆ ಗೌರವ ಕೊಡಬೇಕು. ಅಣ್ಣನ ಮಗ ಅಪರಾಧಿಯಲ್ಲ ಆರೋಪಿ ಅಷ್ಟೇ ಎಂದಿದ್ದಾರೆ, ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಪಟ್ಟಂತೆ ನಾನೂ ಕೂಡ ಆರೋಪಿ ಎಂದೇ ಹೇಳಿದ್ದೇನೆ ಎಂದರು.