ಸ್ಯಾಂಡಲ್ ವುಡ್ ನಿರ್ಮಾಪಕ, ಉದ್ಯಮಿ ಸೌಂದರ್ಯ ಜಗದೀಶ್ ಏಪ್ರಿಲ್ 14ರಂದು ತಮ್ಮ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದೀಗ ಅವರ ಸಾವಿನ ಬಗ್ಗೆ ಪತ್ನಿ ರೇಖಾ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ.
‘ಮೊದಲು ತಾಯಿ ನಿಧನರಾದರು. ಆಮೇಲೆ 15 ದಿನಕ್ಕೆ ಯಜಮಾನರು ತೀರಿಕೊಂಡರು. ಆ ಶಾಕ್ನಲ್ಲಿ ಏನಾಯಿತು ಎಂಬುದು ನಮಗೆ ಗೊತ್ತಿಲ್ಲ. ಈ ಮನೆಯನ್ನು ನಾನು ಮತ್ತು ಅವರು ಸೇರಿ ಕಟ್ಟಿದ್ದು. ಇಂದು ಅವರು ಇಲ್ಲ ಎಂದಾಗ ಈ ಮನೆಯಲ್ಲಿ ನಮಗೆ ಇರೋಕೆ ಆಗುತ್ತಿಲ್ಲ. ಈಗ ಶ್ರೀರಂಗಪಟ್ಟಣದಲ್ಲಿ ಪೂಜೆ ಮಾಡಿ ಅವರ ಬಟ್ಟೆಗಳನ್ನು ಅಲ್ಲಿ ಬಿಡಬೇಕು ಅಂತ ಅರ್ಚಕರು ಹೇಳಿದ್ದಾರೆ. ಹಾಗಾಗಿ ಹಳೇ ಬಟ್ಟೆಗಳನ್ನು ತೆಗೆಯುವಾಗ ಡೆಟ್ ನೋಟ್ ಸಿಕ್ಕಿತು’ ಎಂದು ರೇಖಾ ಜಗದೀಶ್ ಹೇಳಿದ್ದಾರೆ.
‘ಜಗದೀಶ್ ಬರೆದ ಡೆತ್ ನೋಟ್ ನೋಡಿ ತುಂಬ ನೋವಾಯಿತು ಮತ್ತು ಶಾಕ್ ಆಯ್ತು. ಬಿಸ್ನೆಸ್ ಪಾರ್ಟ್ನರ್ಗಳ ಬಗ್ಗೆ ಅವರು ಬರೆದಿದ್ದಾರೆ. ಅನ್ಯಾಯ ಆಗಿದೆ ಅಂತ ಬರೆದಿದ್ದಾರೆ. ತಮಗೆ ತುಂಬ ಕಾಟ, ಕಿರುಕುಳು ಕೊಡುತ್ತಾರೆ ಅಂತ ಈ ಮೊದಲು ಒಮ್ಮೆ ನನ್ನ ಬಳಿ ಹೇಳಿದ್ದರು. ಆದರೆ ಈ ಮಟ್ಟಕ್ಕೆ ಆಗುತ್ತೆ ಅಂತ ನಮಗೆ ಗೊತ್ತಿರಲಿಲ್ಲ. ಏನೇ ಇದ್ದರೂ ನಮ್ಮ ಜೊತೆ ಹಂಚಿಕೊಳ್ಳಿ ಅಂತ ಧೈರ್ಯ ತುಂಬಿದ್ದೆವು. ಪಾರ್ಟ್ನರ್ ಸುರೇಶ್ ಅವರಿಂದ ತುಂಬ ಕಿರುಕುಳ ಆಗಿದೆ’ ಎಂದು ರೇಖಾ ಜಗದೀಶ್ ಆರೋಪಿಸಿದ್ದಾರೆ.
‘ನನಗೆ ಮತ್ತು ನನ್ನ ಮಗನಿಗೆ ಬೆದರಿಕೆ ಇದೆ. ಅಷ್ಟು ಗಟ್ಟಿಯಾಗಿ ಹುಲಿ ರೀತಿ ಇದ್ದ ಅವರನ್ನು ಕೊನೆಕೊನೆಗೆ ಇಷ್ಟು ಸೈಲೆಂಟ್ ಆಗುವಂತೆ ಮಾಡಿ ಈ ಹಂತಕ್ಕೆ ತೆಗೆದುಕೊಂಡು ಬಂದವನು ನಾಳೆ ನನಗೆ ಮತ್ತು ನನ್ನ ಮಗನಿಗೆ ಏನು ಮಾಡುತ್ತಾನೋ ಗೊತ್ತಿಲ್ಲ. ನನಗೆ ಆ ಭಯ ಇದೆ. ಅವರು ಬರೆದಿದ್ದನ್ನೆಲ್ಲ ನಾನು ವೀಕ್ಷಿಸಿದ ಮೇಲೆ ಪಾರ್ಟ್ನರ್ಗಳಿಂದ ನನ್ನ ಗಂಡನಿಗೆ ತುಂಬಾ ಕಿರುಕುಳ ಆಗಿದೆ. ಫೋರ್ಚರಿ ಕೂಡ ಮಾಡಿದ್ದಾರೆ’ ಎಂದು ರೇಖಾ ಜಗದೀಶ್ ಅಳಲು ತೋಡಿಕೊಂಡಿದ್ದಾರೆ.
‘ಖಾಲಿ ಪೇಪರ್ಗೆ ಸಹಿ ಹಾಕಿಸಿಕೊಂಡಿದ್ದಾರೆ. ಸಿಕ್ಕಾಪಟ್ಟೆ ಚೆಕ್ಗಳಿಗೆ ಸೈನ್ ಹಾಕಿಸಿಕೊಂಡಿದ್ದಾರೆ. ಹೀಗೆಲ್ಲ ಬ್ಲ್ಯಾಕ್ ಮೇಲ್ ಮಾಡಿದ್ದಕ್ಕೆ ನಮ್ಮ ಯಜಮಾನರು ಹೋಗಿದ್ದಾರೆ. ನಾವು ನಾಲ್ಕು ಜನ ಒಂದೇ ಗೂಡಿನ ಹಕ್ಕಿಗಳ ರೀತಿ ಇದ್ದೆವು. ನಮ್ಮನ್ನು ಬಿಟ್ಟು ಅವರು ಹೋಗುತ್ತಿರಲಿಲ್ಲ. ಸುರೇಶ್ ಇದೆಲ್ಲವನ್ನೂ ಮಾಡಿದ್ದಾರೆ. ಅಕೌಂಟ್ ಪಾಸ್ವರ್ಡ್ ಕೂಡ ಅವರೇ ಇಟ್ಟುಕೊಂಡು ಹೀಗೆಲ್ಲ ಮಾಡಿದರು. ನಮ್ಮ ಮನೆಯನ್ನು ಈ ಸ್ಥಿತಿಗೆ ತಂದು ಬಿಟ್ಟಿದ್ದಾರೆ. ಲಾಸ್ಟ್ ಕಾಲ್, ಮೆಸೇಜ್ ಅವರದ್ದೇ ಇದೆ. ಫೋರ್ಜರಿ ಮಾಡಿದ ದಾಖಲೆಗಳನ್ನು ತನಿಖಾಧಿಕಾರಿಗಳಿಗೆ ನೀಡಿದ್ದೇನೆ. ತನಿಖೆ ಬಳಿಕ ಎಲ್ಲವೂ ನಿಮಗೆ ಗೊತ್ತಾಗುತ್ತದೆ’ ಎಂದು ರೇಖಾ ಹೇಳಿದ್ದಾರೆ.