ಬರ್ಲಿನ್: ಚರ್ಚ್ ನಲ್ಲಿ ಅಪರಿಚಿತರು ನಡೆಸಿದ ಗುಂಡಿನ ದಾಳಿಯಲ್ಲಿ 7 ಮಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡ ಘಟನೆ ಜರ್ಮನಿಯ ಹ್ಯಾಮ್ಬರ್ಗ್ನ ಯೆಹೋವ್ನ ವಿಟ್ನೆಸ್ ಚರ್ಚ್ನಲ್ಲಿ ನಡೆದಿದೆ.
ಘಟನೆಯಲ್ಲಿ 8 ಜನರಿಗೆ ಗಂಭೀರ ಗಾಯಗಳಾಗಿವೆ. ಹಲವರಿಗೆ ಸಣ್ಣ-ಪುಟ್ಟ ಗಾಯಗಳಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಗುಂಡಿನ ದಾಳಿ ನಡೆಸಿದವರು ಪರಾರಿಯಾಗಿರುವ ಅಥವಾ ಸಾವಿಗೀಡಾದ ಬಗ್ಗೆ ಮಾಹಿತಿ ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾತ್ರಿ 9:15ರ ಸಮಯದಲ್ಲಿ ಪೊಲೀಸರಿಗೆ ತುರ್ತು ಕರೆಯೊಂದು ಬಂದಿದ್ದು, ಕರೆಯ ಆಧಾರದ ಮೇಲೆ ಚರ್ಚ್ ಬಳಿಗೆ ತೆರಳಿದ ಪೊಲೀಸರು ಗಾಯಗೊಂಡವರ ರಕ್ಷಣಾ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.
ಗುಂಡಿನ ದಾಳಿ ನಡೆಸಿದ ಆರೋಪಿಗಳಿಗಾಗಿ ಪೊಲೀಸರು ಹೆಲಿಕಾಪ್ಟರ್ ಮೂಲಕ ಥರ್ಮಲ್ ಇಮ್ಯಾಜಿಂಗ್ ಕ್ಯಾಮೆರಾ ಬಳಸಿ ಕಾರ್ಯಾಚರಣೆ ಆರಂಭಿಸಿದ್ದಾರೆ. ಕಾರ್ಯಾಚರಣೆಗೆ ಅನುಕೂಲವಾಗುವಂತೆ ಸ್ಥಳೀಯ ನಿವಾಸಿಗಳಿಗೆ ಬೇರೆ ಸ್ಥಳಗಳಿಗೆ ತೆರಳುವಂತೆ ಸೂಚನೆ ನೀಡಲಾಗಿದೆ.