ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಇಂದು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ಕೊಟ್ಟು, ಮಂಜುನಾಥನ ದರ್ಶನ ಪಡೆದಿದ್ದಾರೆ. ಕಾಂಗ್ರೆಸ್ ಸರ್ಕಾರ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಭೇಟಿ ಕೊಟ್ಟ ಸಿಎಂ ಹಾಗೂ ಡಿಸಿಎಂಗೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಸಾಥ್ ನೀಡಿದರು.
ಮೈಸೂರಿನಿಂದ ವಿಶೇಷ ವಿಮಾನದ ಮೂಲಕ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ ನಾಯಕರು ಬಳಿಕ ರಸ್ತೆ ಮಾರ್ಗದ ಮೂಲಕ ಮಂಜುನಾಥನ ಸನ್ನಿಧಿಗೆ ಆಗಮಿಸಿದ್ದಾರೆ. ಧರ್ಮಸ್ಥಳದ ಪ್ರವೇಶ ದ್ವಾರದಲ್ಲಿ ವಾದ್ಯ ಘೋಷಗಳ ಸಿಎಂ ಹಾಗೂ ಡಿಕೆಶಿಗೆ ಭವ್ಯ ಸ್ವಾಗತ ಕೋರಲಾಯಿತು. ವೀರೇಂದ್ರ ಹೆಗ್ಗಡೆ ಸಹೋದರ ಹಷೇರ್ಂದ್ರ ಹೆಗ್ಗಡೆ ಕ್ಷೇತ್ರದ ಪರವಾಗಿ ಸ್ವಾಗತಿಸಿದರು.
ಬಳಿಕ ಸಿಎಂ, ಡಿಸಿಎಂ ಹಾಗೂ ಸಚಿವರು ಮುಖ್ಯ ದ್ವಾರದಿಂದ ನಡೆದುಕೊಂಡೇ ದೇವಸ್ಥಾನ ಪ್ರವೇಶಿಸಿ ದ್ದಾರೆ. ಧರ್ಮಸ್ಥಳ ಶ್ರೀಮಂಜುನಾಥ ಸ್ವಾಮಿ ದರ್ಶನ ಪಡೆದ ಸಿಎಂ ಮತ್ತು ಡಿಸಿಎಂ, ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ದೇವರ ದರ್ಶನ ಪಡೆದ ಬಳಿಕ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರನ್ನು ಭೇಟಿ ಮಾಡಿದರು. ಈ ವೇಳೆ ಡಿಕೆಶಿಯವರು ಹೆಗ್ಗಡೆ ಕಾಲಿಗೆ ಬಿದ್ದು ಆಶೀರ್ವಾದ ಪಡೆದರು. ನಂತರ ಹೆಗ್ಗಡೆಯವರ ನಿವಾಸದಲ್ಲಿ ಮಾತುಕತೆ ನಡೆಸಿದರು.