ವಿಜಯನಗರ: ಕಾಂಗ್ರೆಸ್ ಬಿಟ್ಟಿ ಭಾಗ್ಯಗಳನ್ನು ಘೋಷಿಸಿ ನಾಡಿನ ಖಜಾನೆ ಬರಿದು ಮಾಡುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆರೋಪಿಸಿದರು. ವಿಧಾನ ಪರಿಷತ್ ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆ ಪ್ರಯುಕ್ತ ವಿಜಯನಗರ ಜಿಲ್ಲೆ ಹೊಸಪೇಟೆಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಸಭೆಯಲ್ಲಿ ಮತಯಾಚಿಸಿ ಮಾತನಾಡಿದರು.
ಸ್ವಾತಂತ್ರ್ಯ ಬಂದ ಬಳಿಕ 60 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ದೇಶವನ್ನು ದೋಚಿದೆ ಅಷ್ಟೇ. ಈಗ ನೋಡಿದರೆ ಈ ಭಾಗ್ಯ..ಈ ಭಾಗ್ಯ ಎಂದು ಏನೆಲ್ಲಾ ಘೋಷಣೆ ಮಾಡುತ್ತ ದೇಶದ ಖಜಾನೆ ಬರಿದು ಮಾಡಲು ಹೊರಟಿದೆ ಎಂದು ಹರಿಹಾಯ್ದರು. ದೇಶದ ನಾಗರಿಕರಿಗೆ ನಿಜವಾಗಿಯೂ ಬೇಕಾಗಿರುವುದು ಶಿಕ್ಷಣ, ಆರೋಗ್ಯ, ಉದ್ಯೋಗ, ವಸತಿ. ಆದರೆ, ಇದಕ್ಕೆ ಪೂರಕ ಮೂಲ ಸೌಕರ್ಯಗಳನ್ನು ಒದಗಿಸುವುದರ ಬಗ್ಗೆ ಯಾವ ಯೋಜನೆಯೂ ಕಾಂಗ್ರೆಸ್ಸಿಗರಲ್ಲಿ ಇಲ್ಲ ಎಂದು ಜೋಶಿ ಹೇಳಿದರು.
ದೇಶದ ಅಭಿವೃದ್ಧಿಗಾಗಿ ಯಾವ ಯೋಚನೆ, ಯೋಜನೆಯೂ ಕಾಂಗ್ರೆಸ್ ಬಳಿ ಇಲ್ಲ. ಇಂಥವರ ಕೈಗೆ ಅಧಿಕಾರ ಹೋದರೆ ಜನರು ಅಧೋಗತಿ ತಲುಪುತ್ತಾರೆ ಎಂದು ಕಳವಳ ವ್ಯಕ್ತಪಡಿಸಿದರು. ಸದ್ಯ ಕಾಂಗ್ರೆಸ್ ಆಡಳಿತದಲ್ಲಿ ಇರುವ ಕರ್ನಾಟಕವೂ ಶ್ರೀಲಂಕ ಮತ್ತು ಕೇರಳ ಕಂಡಂಥ ದುಸ್ಥಿತಿಯನ್ನೇ ಕಾಣಬೇಕಾದೀತು. ಜನತೆ ಈ ಬಗ್ಗೆ ಎಚ್ಚರದಿಂದ ಇರಬೇಕು ಎಂದು ಕರೆ ನೀಡಿದರು.