ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಇತ್ತೀಚೆಗೆ ತಮ್ಮ ಗೆಳೆಯನ ರೆಸ್ಟೋರೆಂಟ್ನ ಉದ್ಘಾಟನೆಗೆ ಮಂಗಳೂರಿಗೆ ಭೇಟಿ ನೀಡಿದ್ದರು. ಈ ವೇಳೆ ಸುದೀಪ್ ‘ಯಕ್ಷ ಧ್ರುವ ಪಟ್ಲ ಫೌಂಡೇಶನ್’ ಆಯೋಜಿಸಿದ್ದ ‘ಯಕ್ಷ ಧ್ರುವ ಪಟ್ಲ ಸಂಭ್ರಮ 2024’ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ಈ ವೇಳೆ ಅವರನ್ನು ಸನ್ಮಾನಿಸಲಾಯಿತು. ಈ ವೇಳೆ ಸುದೀಪ್ ಮಂಗಳೂರಿನ ಬಗ್ಗೆ ಮಾತನಾಡಿದ್ದಾರೆ.
‘ಎಲ್ಲರಿಗೂ ನಮಸ್ಕಾರ. ವೇದಿಕೆ ಮೇಲಿದ್ದವರು ನಮ್ಮ ತುಳುನಾಡಿಗೆ ನಮ್ಮ ತುಳುನಾಡಿಗೆ ಎಂದು ನಮ್ಮನ್ನು ಹೊರಗಿನವರನ್ನಾಗಿ ಮಾಡುತ್ತಿದ್ದಾರೆ. ತುಳುನಾಡು ಕರ್ನಾಕಟದಲ್ಲೇ ಇದೆ. ಕರ್ನಾಟಕ ನಮ್ಮ ಹೃದಯದಲ್ಲಿದೆ. ನಾವು ಅರ್ಧ ಈಕಡೆಯವರು ಎಂದು ನಿರೂಪಕರು ಹೇಳಿದರು.
‘ಪ್ರತಿ ಬಾರಿ ಇಲ್ಲಿಗೆ ಕರೆದಾಗ ಬಹಳ ಖುಷಿ ಆಗುತ್ತದೆ. ಈ ಊರಿನ ಬಗ್ಗೆ ಗೊತ್ತಿರೋದು ಎಂದರೆ ಅವರು ಸ್ವಾಭಿಮಾನಿಗಳು. ಬಹಳ ಸುಲಭವಾಗಿ ಯಾರನ್ನೂ ಇಷ್ಟಪಡಲ್ಲ. ಅಂಥಹುದರಲ್ಲಿ ಮನಸ್ಸಲ್ಲಿ ನನಗೆ ಸಣ್ಣ ಜಾಗ ಕೊಟ್ಟಿದ್ದೀರಿ. ಅದು ಪೀಠಕ್ಕಿಂತ ದೊಡ್ಡದು. ನಿಮ್ಮ ಗೌರವ ಸ್ವೀಕರಿಸಿಲ್ಲ ಎಂದುಕೊಳ್ಳಬೇಡಿ. ಅದನ್ನು ಸ್ವೀಕರಿಸಿದ್ರೆ ನಾನು ಅದಕ್ಕಾಗಿಯೇ ಬಂದೆ ಎಂದುಕೊಳ್ಳುತ್ತಾರೆ. ನಾನು ಬಂದಿದ್ದು ನನ್ನ ಸ್ನೇಹಿತರಿಗೆ’ ಎಂದರು ಸುದೀಪ್.
‘ನನ್ನ ತಾಯಿ ತುಳು ಚೆನ್ನಾಗಿ ಮಾತಾಡ್ತಾರೆ. ನನಗೆ ಜಾಸ್ತಿ ತುಳು ಬರಲ್ಲ. ಕನ್ನಡ ಚಿತ್ರರಂಗಕ್ಕೆ ನಿಮ್ಮವರು ತುಂಬಾ ಜನ ಬಂದಿದ್ದಾರೆ. ಇದರಿಂದ ಕನ್ನಡ ಯಾವುದು, ತುಳು ಯಾವುದು ಅನ್ನೋದು ತಿಳಿಯುತ್ತಿಲ್ಲ’ ಎಂದು ಹಾಸ್ಯ ಮಾಡಿದರು. ತುಳು ಚಿತ್ರರಂಗದಿಂದ ಕನ್ನಡ ಚಿತ್ರರಂಗಕ್ಕೆ ಬಂದು ಉತ್ತಮ ಸಿನಿಮಾ ನೀಡುತ್ತಿರುವವರ ಬಗ್ಗೆ ಅವರು ಮೆಚ್ಚುಗೆ ಸೂಚಿಸಿದರು.
ವೇದಿಕೆಯ ಮೇಲೆ ಕರಾವಳಿ ಕಲೆಯನ್ನು ತೋರಿಸಲಾಯಿತು. ಇದನ್ನು ಸುದೀಪ್ ಮೆಚ್ಚಿಕೊಂಡರು. ‘ಬಾದ್ಶಾ, ಅಭಿನಯ ಚಕ್ರವರ್ತಿ ಎಂದು ನೀವು ನನ್ನನ್ನು ಕರೆಯುತ್ತೀರಿ. ಆದರೆ, ಹೊರಗೆ ಹೋಗಿ ನೋಡಿದಾಗಲೇ ನಾವೆಷ್ಟು ಚಿಕ್ಕವರು ಅನ್ನೋದು ಗೊತ್ತಾಗುತ್ತದೆ. ಈ ಕಲಾವಿದರ ಮುಂದೆ ನಾವು ಚಿಕ್ಕವರು. ನನ್ನನ್ನು ವೇದಿಕೆಗೆ ಕರೆದಿದ್ದಕ್ಕೆ ಧನ್ಯವಾದ’ ಎಂದರು ಸುದೀಪ್.
ಸದ್ಯ ಸುದೀಪ್ ಅವರು ‘ಮ್ಯಾಕ್ಸ್’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರದ ಶೂಟಿಂಗ್ ಇತ್ತೀಚೆಗೆ ಪೂರ್ಣಗೊಂಡಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದೆ. ಈ ವರ್ಷವೇ ಅವರ ಈ ಸಿನಿಮಾ ತೆರೆಗೆ ಬರೋ ಸಾಧ್ಯತೆ ಇದೆ.