ರಫಾದಲ್ಲಿ ಇಸ್ರೇಲ್ ನಡೆಸಿದ ದಾಳಿಯನ್ನು ಖಂಡಿಸಿರುವ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್, ಈ ದಾಳಿಯು “ಈ ಮಾರಣಾಂತಿಕ ಸಂಘರ್ಷದಿಂದ ಆಶ್ರಯ ಪಡೆಯುತ್ತಿದ್ದ ಹಲವಾರು ಮುಗ್ಧ ನಾಗರಿಕರನ್ನು ಕೊಂದಿದೆ” ಎಂದಿದ್ದಾರೆ.
ತಮ್ಮ ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಪೋಸ್ಟ್ ಮಾಡಿರುವ ಗುಟೆರೆಸ್, “ಈ ಮಾರಣಾಂತಿಕ ಸಂಘರ್ಷದಿಂದ ಆಶ್ರಯ ಪಡೆಯುತ್ತಿದ್ದ ಹಲವಾರು ಮುಗ್ಧ ನಾಗರಿಕರನ್ನು ಕೊಂದ ಇಸ್ರೇಲ್ ನ ಕ್ರಮಗಳನ್ನು ನಾನು ಖಂಡಿಸುತ್ತೇನೆ. ಗಾಜಾದಲ್ಲಿ ಸುರಕ್ಷಿತ ಸ್ಥಳವಿಲ್ಲ. ಈ ಭಯಾನಕತೆ ನಿಲ್ಲಬೇಕು ಎಂದರು.
ಸ್ಥಳಾಂತರಗೊಂಡ ಜನರ ಶಿಬಿರದ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ಕನಿಷ್ಠ 45 ಜನರು ಸಾವನ್ನಪ್ಪಿದ್ದಾರೆ ಮತ್ತು 200 ಜನರು ಗಾಯಗೊಂಡಿದ್ದಾರೆ ಎಂದು ಗಾಝಾದ ಸರ್ಕಾರಿ ಮಾಧ್ಯಮ ಕಚೇರಿ ತಿಳಿಸಿದೆ ಎಂದು ಸಿಎನ್ಎನ್ ವರದಿ ಮಾಡಿದೆ.
ದಾಳಿಯ ಸ್ವಲ್ಪ ಸಮಯದ ನಂತರ, ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್) ಹಮಾಸ್ ಕಾಂಪೌಂಡ್ ಅನ್ನು ಗುರಿಯಾಗಿಸಿಕೊಂಡು ಇಬ್ಬರು ಹಿರಿಯ ಹಮಾಸ್ ಅಧಿಕಾರಿಗಳನ್ನು ಕೊಲ್ಲಲಾಗಿದೆ ಎಂದು ಘೋಷಿಸಿತು. ತಿಂಗಳುಗಳಲ್ಲಿ ಇಸ್ರೇಲಿ ನಗರ ಟೆಲ್ ಅವೀವ್ ಮೇಲೆ ಹಮಾಸ್ ನಡೆಸಿದ ಮೊದಲ ರಾಕೆಟ್ ದಾಳಿಯ ನಂತರ ಇಸ್ರೇಲ್ ದಾಳಿ ನಡೆದಿದೆ.