ರಾಕಿಂಗ್ ಸ್ಟಾರ್ ಯಶ್ ಕೈ ಹಿಡಿದ ಬಳಿಕ ನಟನೆಯಿಂದ ದೂರ ಉಳಿದಿರೋ ನಟಿ ರಾಧಿಕಾ ಪಂಡಿತ್ ಸದ್ಯ ಪತಿ, ಮಕ್ಕಳ ಜೊತೆ ಹಾಯಾಗಿ ಸಂಸಾರ ನಡೆಸುತ್ತಿದ್ದಾರೆ. ಯಶ್ ವೃತ್ತಿ ಬದುಕಿಗೆ ಬೆಂಬಲವಾಗಿರುವ ನಟಿ ಮಗಳು ಹಾಗೂ ಮಗನ ಆರೈಕೆಯಲ್ಲಿ ತೊಡಗಿಕೊಂಡಿದ್ದಾರೆ. ರಾಧಿಕಾ ಚಿತ್ರರಂಗದ ಜೊತೆಗಿನ ನಂಟನ್ನು ಹಾಗೆಯೇ ಇಟ್ಟುಕೊಂಡಿದ್ದಾರೆ. ಆದಾಗ್ಯೂ ನಟನೆಯಿಂದ ದೂರವೇ ಇದ್ದಾರೆ. ಈ ವಿಚಾರದಲ್ಲಿ ಅಭಿಮಾನಿಗಳಿಗೆ ಬೇಸರ ಇದೆ. ಅವರು ಯಾವಾಗ ನಟನೆಗೆ ಮರಳುತ್ತಾರೆ ಎನ್ನುವ ಪ್ರಶ್ನೆಯನ್ನು ಆಗಾಗ ಕೇಳಲಾಗುತ್ತದೆ. ಇದಕ್ಕೆ ರಾಧಿಕಾ ಕೊನೆಗೂ ಉತ್ತರ ನೀಡಿದ್ದಾರೆ.
ರಾಧಿಕಾ ಪಂಡಿತ್ ಅವರು ಇನ್ಸ್ಟಾಗ್ರಾಮ್ನಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅಭಿಮಾನಿಗಳಿಗಾಗಿ ಅವರು ಪೋಸ್ಟ್ಗಳನ್ನು ಹಂಚಿಕೊಳ್ಳುತ್ತಾರೆ. ರಾಧಿಕಾ ಪಂಡಿತ್ ಇತ್ತೀಚೆಗೆ ‘ಆಸ್ಕ್ ಮಿ ಎನಿಥಿಂಗ್’ ಸೆಷನ್ ನಡೆಸೋದಾಗಿ ಹೇಳಿದ್ದರು. ಅದೇ ರೀತಿ, ಅವರು ಅಭಿಮಾನಿಗಳಿಗೆ ಪ್ರಶ್ನೆ ಕೇಳೋಕೆ ಅವಕಾಶ ನೀಡಿದ್ದರು. ಇದರಲ್ಲಿ ಹಲವು ರೀತಿಯ ಪ್ರಶ್ನೆಗಳು ರಾಧಿಕಾಗೆ ಬಂದಿವೆ.
‘ನಟನೆಗೆ ಕಂಬ್ಯಾಕ್ ಯಾವಾಗ’ ಎಂದು ಕೆಲವರು ಕೇಳಿದ್ದಾರೆ. ಇದಕ್ಕೆ ಅವರು ‘ಸರಿಯಾದ ಸಮಯ ಬಂದಾಗ’ ಎಂದು ಉತ್ತರಿಸಿದ್ದಾರೆ. ಅವರ ಉತ್ತರ ಕೇಳಿ ಅನೇಕರಿಗೆ ಬೇಸರ ಆಗಿದೆ. ಅವರ ಉತ್ತರದಲ್ಲಿ ಸ್ಪಷ್ಟತೆ ಇಲ್ಲ ಎಂದು ಫ್ಯಾನ್ಸ್ ಬೇಸರ ಮಾಡಿಕೊಂಡಿದ್ದಾರೆ. ರಾಧಿಕಾ ಪಂಡಿತ್ ಅವರ ಅಭಿಮಾನಿ ಬಳಗ ದೊಡ್ಡದಿದೆ. ಅವರು ನಟನೆಗೆ ಕಂಬ್ಯಾಕ್ ಮಾಡಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ.
‘ಮೊಗ್ಗಿನ ಮನಸು’ ಸಿನಿಮಾ ಮೂಲಕ ರಾಧಿಕಾ ಪಂಡಿತ್ ಕನ್ನಡ ಚಿತ್ರರಂಗದಲ್ಲಿ ಮಿಂಚಿದರು. ಆ ಬಳಿಕ ಹಲವು ಸೂಪರ್ಸ್ಟಾರ್ಗಳ ಜೊತೆ ನಟಿಸಿ, ಹಲವು ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಯಶ್ ಹಾಗು ರಾಧಿಕಾ ಕೆಮಿಸ್ಟ್ರಿ ತೆರೆಮೇಲೆ ಪ್ರೇಕ್ಷಕರಿಗೆ ಇಷ್ಟ ಆಗಿದೆ. 2019ರಲ್ಲಿ ರಿಲೀಸ್ ಆದ ‘ಆದಿಲಕ್ಷ್ಮಿ’ ಪುರಾಣ ಚಿತ್ರವೇ ಕೊನೆ, ಇದಾದ ಬಳಿಕ ಅವರು ಯಾವುದೇ ಸಿನಿಮಾದಲ್ಲೂ ಬಣ್ಣ ಹಚ್ಚಿಲ್ಲ. ಆದರೆ ಚಿತ್ರರಂಗದ ಜೊತೆಗಿನ ನಂಟನ್ನೂ ಹಾಗೆಯೇ ಉಳಿಸಿಕೊಂಡಿದ್ದಾರೆ.