ಸೋಷಿಯಲ್ ಮೀಡಿಯಾದಿಂದ ಅದೆಷ್ಟು ಅನುಕೂಲಗಳಿವೆಯೋ ಅಷ್ಟೇ ಅನಾನುಕೂಲವೂ ಇದೆ. ಇಂಡೋನೇಷ್ಯಾದಲ್ಲಿ ಯುವಕನೊಬ್ಬ ಮಾಡಿದ ಎಡವಟ್ಟು ಸಾಮಾಜಿಕ ಜಾಲತಾಣ ಬಳಕೆದಾರರನ್ನು ಚಿಂತೆಗೀಡು ಮಾಡಿದೆ.
ಸೋಷಿಯಲ್ ಮೀಡಿಯಾದಲ್ಲಿ ಪರಿಚಯವಾದ ಹುಡುಗಿಯಿಂದ ಯುವಕನೋರ್ವ ಪೊಲೀಸ್ ಠಾಣೆಯ ಮೆಟ್ಟಿಲೇರುವಂತೆ ಆಗಿದೆ.
ಸಂತ್ರಸ್ತ ಯುವಕ ಇಂಡೋನೇಷ್ಯಾದ ನರಿಂಗಲ್ ಮೂಲದವನಾಗಿದ್ದು, ಕಳೆದ ವರ್ಷ ಈತನಿಗೆ 26 ವರ್ಷದ ಆದಿಂದಾ ಕನ್ಜಾ ಹೆಸರಿನ ಯುವತಿ ಸಾಮಾಜಿಕ ಜಾಲತಾಣದ ಮೂಲಕ ಪರಿಚಿತಳಾದಳು. ಚಾಟ್ಗಳ ಮೂಲಕ ಇಬ್ಬರು ಸ್ನೇಹಿತರಾದರು ಮತ್ತು ಬಳಿಕ ಸ್ನೇಹ ಪ್ರೀತಿಗೆ ತಿರುಗಿತು. ಅಲ್ಲದೆ, ಶೀಘ್ರದಲ್ಲೇ ವೈಯಕ್ತಿಕವಾಗಿ ಭೇಟಿಯಾಗಲು ಇಬ್ಬರು ನಿರ್ಧರಿಸಿದರು.
ಇಬ್ಬರು ಭೇಟಿಯಾದಾಗಲೆಲ್ಲಾ ಕನ್ಜಾ ಸಾಂಪ್ರದಾಯಿಕ ಮುಸ್ಲಿಂ ಉಡುಗೆ ತೊಡುತ್ತಿದ್ದರು. ಹೀಗಾಗಿ ಒಮ್ಮೆಯೂ ಆಕೆಯ ಮುಖವನ್ನು ನೋಡಲಾಗಲಿಲ್ಲ ಎಂದು ಸಂತ್ರಸ್ತ ಯುವಕ ಹೇಳಿಕೊಂಡಿದ್ದಾನೆ. ತಾನು ಪ್ರೀತಿ ಮಾಡುತ್ತಿದ್ದ ಯುವತಿ ಮುಖ ಮುಚ್ಚಿಕೊಳ್ಳುವುದು ಯುವಕನಿಗೆ ಸಮಸ್ಯೆಯಾಗಿ ಕಾಣಲಿಲ್ಲ. ಮುಖ ನೋಡದೇ ಎಷ್ಟೋ ಮಂದಿ ಪ್ರೀತಿ ಮಾಡಿರುವಂತೆ ತನ್ನದು ಕೂಡ ಒಂದು ಪರಿಶುದ್ಧ ಪ್ರೀತಿಯ ಸಂಕೇತವೆಂದು ಭಾವಿಸಿದನು.
ಇಬ್ಬರ ಪ್ರೀತಿ ಗಾಢವಾದಂತೆ ಕನ್ಜಾಳನ್ನು ಮದುವೆಯಾಗಲು ಯುವಕ ನಿರ್ಧರಿಸಿದ. ತಾನೊಬ್ಬ ಅನಾಥೆ ಎಂದು ಕನ್ಜಾ ಹೇಳಿಕೊಂಡಿದ್ದರಿಂದ ಯುವಕನ ಮನೆಯಲ್ಲಿಯೇ ಮದುವೆ ಸಮಾರಂಭ ಜರುಗಿತು. ಈ ಸಂದರ್ಭದಲ್ಲಿ ಯುವತಿ ಕೇವಲ ಐದು ಗ್ರಾಂ ಚಿನ್ನವನ್ನು ಧರಿಸಿದ್ದಳು. ಮದುವೆಯಾದ ಬಳಿಕ ಇಬ್ಬರು ತಮ್ಮ ಮದುವೆಯನ್ನು ನೋಂದಾಯಿಸಲಿಲ್ಲ. ತನಗೆ ಪೀರಿಯಡ್ ಎಂಬ ನೆಪ ಸೇರಿದಂತೆ ಅನೇಕ ಕಾರಣಗಳನ್ನು ನೀಡಿ ಯುವಕ ತನ್ನ ಬಳಿ ಸೇರಲು ಕನ್ಜಾ ಬಿಡುತ್ತಿರಲಿಲ್ಲ. ಮದುವೆಯಾದ ಹನ್ನೆರಡು ದಿನಗಳವರೆಗೂ ಕಣ್ಣಾಮುಚ್ಚಾಲೆ ಆಟ ಸಾಗಿತು. ಅಲ್ಲದೆ, ಕನ್ಜಾ, ಯುವಕನ ಮನೆಯವರ ಜತೆಯು ಸರಿಯಾಗಿ ಮಾತನಾಡುತ್ತಿರಲಿಲ್ಲ ಮತ್ತು ಮನೆಯೊಳಗೆ ಯಾವಾಗಲೂ ಬುರ್ಖಾ ಧರಿಸಿರುವುದನ್ನು ಗಮನಿಸಿದ ಯುವಕನಿಗೆ ಅನುಮಾನ ಬಂದಿತ್ತು.
ಇದಾದ ನಂತರ ಸಂತ್ರಸ್ತ ಯುವಕ, ಕನ್ಜಾಳ ಬಗ್ಗೆ ವಿವರವಾಗಿ ವಿಚಾರಿಸಿದಾಗ ಆಘಾತಕಾರಿ ಮಾಹಿತಿ ಬಹಿರಂಗವಾಗಿದೆ. ಇದನ್ನು ಕೇಳಿ ಯುವಕನೇ ಒಂದು ಕ್ಷಣ ಬೆಚ್ಚಿಬಿದ್ದಿದ್ದಾನೆ. ಅಂದಹಾಗೆ ಕನ್ಜಾ ಅನಾಥಳಾಗಿರಲಿಲ್ಲ. ಆಕೆಯ ಪಾಲಕರು ಇನ್ನೂ ಬದುಕಿದ್ದಾರೆ. ಜೊತೆಗೆ ಇದುವರೆಗೂ ತಾನು ಪ್ರೀತಿಸಿ, ಮದುವೆಯಾದ ಕನ್ಜಾ, ಯುವತಿಯಲ್ಲ ಬದಲಾಗಿ ಆತ ಓರ್ವ ಯುವಕ ಎಂಬುದನ್ನು ತಿಳಿದು ಸಂತ್ರಸ್ತ ಯುವಕ ಕಂಗಾಲಾಗಿದ್ದಾರೆ. ಇನ್ನು ಈ ವಂಚನೆ ಬಗ್ಗೆ ತಮಗೆ ತಿಳಿದಿಲ್ಲ ಎಂದು ಕಾನ್ಜಾ ಪಾಲಕರು ಸಂತ್ರಸ್ತ ಯುವಕನಿಗೆ ತಿಳಿಸಿದ್ದಾರೆ. ಕನ್ಜಾ ಹೆಸರಿನಲ್ಲಿದ್ದ ವ್ಯಕ್ತಿಯ ಅಸಲಿ ಮುಖವಾಡ ಕಳಚಿಬಿದ್ದ ಬೆನ್ನಲ್ಲೇ ಸಂತ್ರಸ್ತ ಯುವಕ ಪೊಲೀಸ್ ಮೆಟ್ಟಿಲೇರಿ ದೂರು ದಾಖಲಿಸಿದ್ದಾನೆ.
ಸಂತ್ರಸ್ತ ಯುವಕನ ಆಸ್ತಿ ಲಪಟಾಯಿಸುವುದು ಕನ್ಜಾ ಗುರಿಯಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಕನ್ಜಾ ಮಹಿಳೆಯಂತೆ ಮಾತನಾಡುತ್ತಿದ್ದನು ಮತ್ತು ಆತ ತನ್ನ ಜೀವನದಲ್ಲಿ ಅನೇಕ ಮಹಿಳೆಯರೊಂದಿಗೆ ಡೇಟಿಂಗ್ ಸಹ ಮಾಡಿದ್ದಾನೆ. ಅಲ್ಲದೆ, ಮಹಿಳೆಯಂತೆ ನಟಿಸುವ ಮೂಲಕ ಪುರುಷರೊಂದಿಗೂ ಡೇಟಿಂಗ್ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.