ಮಂಡ್ಯದ ಗಂಡು ರೆಬೆಲ್ ಸ್ಟಾರ್ ಅಂಬರೀಶ್ ಅವರ ಸೇವೆ, ಸಾಧನೆ ಹಾಗೂ ಅವರ ಮೇಲಿದ್ದ ಜನರ ಪ್ರೀತಿಯನ್ನು ಚಿರಸ್ಥಾಯಿಯಾಗಿ ಉಳಿಸುವ ನಿಟ್ಟಿನಲ್ಲಿ ಡಾ. ಅಂಬರೀಶ್ ಫೌಂಡೇಷನ್ ಆರಂಭಿಸಲಾಗಿದ್ದು, ವಿದ್ಯಾರ್ಥಿಗಳನ್ನು ದತ್ತು ಪಡೆದು ಶಿಕ್ಷಣ ಕೊಡಿಸಲಾಗುವುದು. ಜೊತೆಗೆ ಇತರೆ ಸಾಮಾಜಿಕ ಸೇವೆಗಳನ್ನೂ ಮಾಡಲಾಗುವುದು ಎಂದು ನಟಿ ಹಾಗೂ ಸಂಸದೆ ಸುಮಲತಾ ಅಂಬರೀಶ್ ಹೇಳಿದ್ದಾರೆ.
ಯಾವತ್ತೂ ಒಬ್ಬ ವ್ಯಕ್ತಿಗೆ ಅಧಿಕಾರ ಶಾಶ್ವತ ಅಲ್ಲ, ಜನರ ಪ್ರೀತಿ ಶಾಶ್ವತ. ಎಲ್ಲ ಮನೆಯಲ್ಲಿ ಮಕ್ಕಳು ಜನಿಸೋದು ಸಾಮಾನ್ಯ. ಆದರೆ, ಉತ್ತಮ ವ್ಯಕ್ತಿತ್ವ ಇರುವ ಮಕ್ಕಳು ಜನಿಸಿವುದು ಅಪರೂಪ. ಅಂಬರೀಶ್ ಅದನ್ನ ಪಡೆದುಕೊಂಡು ಬಂದವರು. ನನಗಿಂತ ಮಂಡ್ಯ ಜಿಲ್ಲೆಯ ಜನರಿಗೆ ಅವರ ಬಗ್ಗೆ ಗೊತ್ತಿದೆ. ಡಾ.ಅಂಬರೀಶ್ ಫೌಂಡೇಶನ್ ಸ್ಥಾಪನೆ ಮಾಡಿದ್ದೇವೆ. ಅವರ ಸಾಧನೆಗಳನ್ನ ಮುಂದುವರಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತಿದೆ ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ನಾನು ಮಂಡ್ಯ ಜಿಲ್ಲೆಯ ಸಂಸದೆಯಾಗಿರುವುದು ದೊಡ್ಡದಲ್ಲ, ಜಿಲ್ಲೆಯ ಸೊಸೆಯಾಗಿರುವುದು ಹೆಮ್ಮೆಯ ವಿಷಯವಾಗಿದೆ. ಈ ಜಿಲ್ಲೆಯಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿದ್ದಾರೆ. ಇಂದಿನ ವಿದ್ಯಾರ್ಥಿಗಳು ಸಹ ಸಾಧನೆ ಮಾಡಿದರೆ ಮುಂದೆ ಜಿಲ್ಲೆಗೆ ಮತ್ತಷ್ಟು ಉತ್ತಮ ಹೆಸರು ಬರುತ್ತದೆ. ಈ ನಿಟ್ಟಿನಲ್ಲಿ ಡಾ. ಅಂಬರೀಶ್ ಫೌಂಡೇಷನ್ನಿಂದ ವಿದ್ಯಾರ್ಥಿಗಳನ್ನ ದತ್ತು ತೆಗೆದುಕೊಂಡು ವಿದ್ಯಾಭ್ಯಾಸ ಕೊಡಿಸುವ ಕೆಲಸ ಮಾಡುತ್ತೇವೆ. ನಮ್ಮ ಫೌಂಡೇಶನ್ ವತಿಯಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ ಎಂದರು.
ಮಂಡ್ಯ ಜಿಲ್ಲೆಯ ಜನತೆ ಅಂಬರೀಶ್ ಅವರನ್ನು ಪ್ರೀತಿ ಅಭಿಮಾನ ಕೊಟ್ಟು ಬೆಳೆಸಿದವರು. ಅಂಬರೀಶ್ ಅವರನ್ನ ರಾಜ್ಯದ ಜನರು ನೋಡುವುದಕ್ಕೆ ಮುಗಿ ಬೀಳುತ್ತಿದ್ದರು. ಆದರೆ, ಅಂಬರೀಶ್ ಮಂಡ್ಯದವರನ್ನ ನೋಡಲು ಇಷ್ಟ ಪಡುತ್ತಿದ್ದರು. ಅಧಿಕಾರ ಯಾವತ್ತು ಶಾಸ್ವತ ಅಲ್ಲ. ಸಂಸದೆ ಸ್ಥಾನ ಹೋದರು ಜಿಲ್ಲೆಯ ಸೊಸೆ ಇದೆ. ಅದು ಯಾವತ್ತು ನನ್ನ ಬಿಟ್ಟುಹೋಗಲ್ಲ. ರಾಜಕಾರಣದಲ್ಲಿ ಏನೋ ಆಗಬೇಕು ಅಂತ ರಾಜಕಾರಣಕ್ಕೆ ಬಂದಿಲ್ಲ. ಜನರ ಸೇವೆ ಮಾಡಲು ರಾಜಕಾರಣಕ್ಕೆ ಬಂದೆ. ರಾಜಕಾರಣದಲ್ಲಿ ಇಲ್ಲದಿದ್ದರೂ ಮಂಡ್ಯ ಜಿಲ್ಲೆಯ ಜನರ ಸಂಬಂಧ ನಿರಂತರ. ಅಧಿಕಾರ ಶಾಶ್ವತ ಅಲ್ಲ, ಪ್ರೀತಿ ಶಾಶ್ವತ. ನಿಮ್ಮ ಸಹಕಾರ ಆಶೀರ್ವಾದ ಎಂದೆಂದಿಗೂ ಇರಲಿ. ಫೌಂಡೇಶನ್ ಮೂಲಕ ಸಮಾಜಮುಖಿ ಕಾರ್ಯಕ್ರಮ ಆಗುತ್ತದೆ. ಕಷ್ಟದಲ್ಲಿರುವವರಿಗೆ ಸಹಾಯವಾಗುತ್ತದೆ ಎಂದು ಭರವಸೆ ನೀಡಿದರು.
ಅಂಬರೀಶ್ ಅವರು ಸಿನಿಮಾ ರಂಗದಲ್ಲಿ ನಾಯಕರಾಗಿದ್ದರು. ಯಾವತ್ತು ಅವರಲ್ಲಿ ನಾನು ಅನ್ನೋ ಅಹಂ ಇರಲಿಲ್ಲ. ರಾಜಕಾರಣದಲ್ಲಿ ಬಂದು ಅಧಿಕಾರಕ್ಕೆ ಆಸೆ ಪಟ್ಟವರಲ್ಲ. ಅನ್ಯಾಯ ಮಾಡಿಲ್ಲ, ಸಮಾಜಮುಖಿ ಕಾರ್ಯಗಳನ್ನು ಮಾಡಿದ್ದರು. ಯಾವತ್ತು ಅವರು ಪಬ್ಲಿಸಿಟಿ ಮಾಡಿಕೊಂಡಿಲ್ಲ. ಅವರು ಮಾಡಿದ ಕೆಲಸ ಎಲ್ಲರಿಗೂ ಗೊತ್ತಾಗಬೇಕು ಅವರ ಸಾಧನೆ ಎಲ್ಲರು ನೆನೆಪಿಟ್ಟಿಕೊಳ್ಳಬೇಕು. ಅಂಬರೀಶ್ ಅವರು ಜೀವನ ಎಲ್ಲರಿಗೂ ಸ್ಪೂರ್ತಿಯಾಗಬೇಕು ಎಂದು ಸುಮಲತಾ ಹೇಳಿದರು.