ಬೆಂಗಳೂರು: ಎಲ್ಲೆಲ್ಲಿ ಪಂಚ್ ಕೊಡಬೇಕು, ಎಲ್ಲೆಲ್ಲಿ ಗಂಭೀರವಾಗಿ ಮಾತನಾಡಬೇಕು ಎನ್ನುವ ವಿಚಾರದಲ್ಲಿ ಮೋದಿ ಮಾಸ್ಟರ್ ಎಂದು ಮಂಡ್ಯ ಸಂಸದೆ ಸುಮಲತಾ ಅಂಬರೀಶ್ (Sumalatha Ambareesh) ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೋದಿ ಅವರ ಮಾತುಗಳನ್ನು ಹೊಸದಾಗಿ ನಾನು ಕೇಳುತ್ತಿಲ್ಲ.
ಕಾರ್ಯಕ್ರಮದಲ್ಲಿ 50 ಸಾವಿರ ಜನ ಇದ್ದರೇ ಅವರ ಒಂದು ಮಾತಿನಿಂದಾಗಿ 45 ಸಾವಿರ ಜನ ಅವರ ಪರವಾಗುತ್ತಾರೆ. ಮೋದಿ ಮಾತುಗಳಲ್ಲಿ ನಿಜವಾಗಿಯೂ ತೂಕವಿರುತ್ತದೆ. ನಾನು ಪಾರ್ಲಿಮೆಂಟ್ನಲ್ಲಿ ಅವರ ಮಾತುಗಳನ್ನು ಕೇಳಿದ್ದೇನೆ ಸಾಕಷ್ಟು ಕಲಿತಿದ್ದೇನೆ. ಬಹಳ ತೂಕವಾಗಿ ಮಾತನಾಡುತ್ತಾರೆ. ವಿಷಯವನ್ನು ಅರ್ಥ ಮಾಡಿಕೊಂಡು ಚೆನ್ನಾಗಿ ಮಾತನಾಡ್ತಾರೆ ಎಂದು ಪ್ರಶಂಸಿಸಿದರು.
ಬೆಂಗಳೂರು ಮೈಸೂರು ರಸ್ತೆ ಹೆದ್ದಾರಿ (Mysuru Bengaluru Highway) ಇಲ್ಲಿ ಲೋಕಾರ್ಪಣೆಗೊಳ್ಳುತ್ತಿರುವುದು ಮಂಡ್ಯ (Mandya) ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದೆ. 118 ಕಿ.ಮೀ ಅಷ್ಟು ಉದ್ದದ ಹೈವೇ ಇದ್ದಾಗಿದ್ದು, ಎಲ್ಲಿ ಬೇಕಾದರೂ ಉದ್ಘಾಟನೆ ಮಾಡಬಹುದಿತ್ತು. ಆದರೂ ಮಂಡ್ಯವನ್ನ ಉದ್ಘಾಟನೆಗಾಗಿ ಆಯ್ಕೆ ಮಾಡಿದ್ದಾರೆ. ಮಂಡ್ಯದ ಪ್ರಾಮುಖ್ಯತೆ ಏನು ಎಂದು ಪ್ರಧಾನಮಂತ್ರಿ ಅವರು ಗುರುತಿಸಿದ್ದಾರೆ. ಹಾಗಾಗಿ ಮಂಡ್ಯದಲ್ಲಿ ಉದ್ಘಾಟನೆ ಇಟ್ಕೊಂಡಿದ್ದಾರೆ, ಇದಕ್ಕೆ ನಾವೆಲ್ಲ ಹೆಮ್ಮೆ ಪಡಬೇಕು ಎಂದರು.
ಇಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಮಂಡ್ಯಕ್ಕೆ ಬರುತ್ತಿದ್ದಾರೆ. ಒಂದು ರೋಡ್ ಶೋ ಕೂಡ ಮಾಡ್ತಾರೆ. ನಾನು ಗೆಜ್ಜಲಗೆರೆ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತೇನೆ. ಮುಖ್ಯ ಕಾರ್ಯಕ್ರಮದ ವೇದಿಕೆಯಲ್ಲಿ ನಾವು ಮೋದಿ ಅವರನ್ನ ಸ್ವಾಗತ ಮಾಡುತ್ತೇವೆ. ಮೈಸೂರು ಬೆಂಗಳೂರು ಎಕ್ಸ್ಪ್ರೆಸ್ ಹೈವೇ ಒಳ್ಳೆಯ ರಸ್ತೆ ನಿರ್ಮಾಣ ಆಗಿದೆ. ನಾನು ಇದೇ ರಸ್ತೆಯಲ್ಲಿ ಓಡಾಡ್ತಿದ್ದೇನೆ. ಮಂಡ್ಯಕ್ಕೆ ಮೊದಲೆಲ್ಲ ಎರಡು ಗಂಟೆ ಹಿಡಿಯುತ್ತಿತ್ತು. ಈಗ ಕಡಿಮೆ ಅವಧಿಯಲ್ಲಿ ನಾನೇ ಮಂಡ್ಯಕ್ಕೆ ಹೋಗಿ ಬರುತ್ತಿದ್ದೇನೆ. ಇದು ಎಲ್ಲರೂ ಮೆಚ್ಚುವಂತಹ ರಸ್ತೆ ಎಂದು ಸಂತಸ ವ್ಯಕ್ತಪಡಿಸಿದರು.
ಮಂಡ್ಯ ರಸ್ತೆ ನಿರ್ಮಾಣ ವಿಚಾರದಲ್ಲಿ ಕ್ರೆಡಿಟ್ ಪಾಲಿಟಿಕ್ಸ್ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಜ್ಯೋತಿಷಿ ಒಬ್ಬರಿಗೆ ಕನಸು ಬಿತ್ತಂತೆ ನಿಮಗೆ ಮಗು ಆಗುತ್ತೆ ಅಂತ. ಅದೇ ರೀತಿ ತಂದೆ, ತಾಯಿಗೆ ಜ್ಯೋತಿಷಿ ಹೇಳಿದ ಹಾಗೆ ಮಗು ಆಯಿತಂತೆ. ಈಗ ಕ್ರೆಡಿಟ್ ಜ್ಯೋತಿಷಿಗೆ ಹೋಗಬೇಕಾ, ಆ ತಂದೆ ತಾಯಿಗೆ ಹೋಗಬೇಕಾ? ಈ ರೀತಿ ಕ್ರೆಡಿಟ್ ತೆಗೆದುಕೊಳ್ಳುವುದಕ್ಕೆ ತುಂಬಾ ಜನ ಇರುತ್ತಾರೆ? ಈ ವಿಚಾರದಲ್ಲಿ ಕ್ರೆಡಿಟ್ ಕ್ಲೈಮ್ ಮಾಡಲು ಸಾಧ್ಯವಿಲ್ಲ. ಜನರಿಗೆ ಚೆನ್ನಾಗಿ ಗೊತ್ತಿದೆ, ಯಾರಿಗೆ ಕ್ರೆಡಿಟ್ ಕೊಡಬೇಕು ಅಂತ ಜೆಡಿಎಸ್ ಹಾಗೂ ಕಾಂಗ್ರೆಸ್ಗೆ ಟಾಂಗ್ ನೀಡಿದರು.