ಇಸ್ರೇಲ್ ಗಡಿಯಲ್ಲಿನ ವಸತಿ ಪ್ರದೇಶದ ಮೇಲೆ ಹಮಾಸ್ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ಈ ಬಗ್ಗೆ ಹಮಾಸ್ ವಿಡಿಯೋ ಒಂದನ್ನು ಬಿಡುಗಡೆ ಮಾಡಿದೆ. ಸ್ವಯಂಚಾಲಿತ ಬಂದೂಕುಗಳನ್ನು ಹೊಂದಿರುವ ಮೂವರು ವ್ಯಕ್ತಿಗಳು ವೆಸ್ಟ್ ಬ್ಯಾಂಕ್ ಕಡೆಯಿಂದ ಇಸ್ರೇಲಿ ವಸತಿ ಪ್ರದೇಶದ ಮೇಲೆ ಹಲವು ಸುತ್ತು ಗುಂಡು ಹಾರಿಸುತ್ತಿರುವುದು ವಿಡಿಯೋದಲ್ಲಿ ಕಾಣಿಸಿದೆ.
ಹಮಾಸ್ನಿಂದ ದಾಳಿಗೊಳಗಾದ ಇಸ್ರೇಲ್ ಮತ್ತು ವೆಸ್ಟ್ ಬ್ಯಾಂಕ್ ಪ್ರತ್ಯೇಕಿಸುವ ತಡೆಗೋಡೆಯ ಬಳಿ ಇರುವ ಬ್ಯಾಟ್ ಹೆಫರ್ ಎಂಬ ಹಳ್ಳಿಯಲ್ಲಿ ಯಾವುದೇ ಸಾವು – ನೋವುಗಳು ಸಂಭವಿಸಿಲ್ಲ ಎಂದು ಇಸ್ರೇಲ್ನ ಆರ್ಮಿ ರೇಡಿಯೋ ವರದಿ ಮಾಡಿದೆ. ಹಮಾಸ್ ಹೆಡ್ ಬ್ಯಾಂಡ್ ಧರಿಸಿರುವ ದಾಳಿಕೋರರು ವೆಸ್ಟ್ ಬ್ಯಾಂಕ್ನ ಪ್ಯಾಲೆಸ್ಟೈನ್ ನಗರ ತುಲ್ಕರ್ಮ್ನ ನಿರಾಶ್ರಿತರ ಶಿಬಿರಗಳ ನಿವಾಸಿಗಳು ಎನ್ನಲಾಗಿದೆ. ಇಸ್ರೇಲಿ ಸೇನೆಯು ತುಲ್ಕರ್ಮ್ ಮತ್ತು ವೆಸ್ಟ್ ಬ್ಯಾಂಕ್ನ ಇತರ ಪ್ಯಾಲೆಸ್ಟೈನ್ ಪಟ್ಟಣಗಳು ಮತ್ತು ನಗರಗಳ ಮೇಲೆ ಪದೇ ಪದೆ ದಾಳಿ ನಡೆಸುತ್ತಿರುವ ಮಧ್ಯೆ ಹಮಾಸ್ ಉಗ್ರರು ಮತ್ತೊಮ್ಮೆ ಇಸ್ರೇಲ್ ಪ್ರದೇಶದ ಮೇಲೆ ದಾಳಿ ಮಾಡಿದ್ದಾರೆ.
ದಕ್ಷಿಣ ಗಾಜಾ ಪಟ್ಟಿಯ ರಫಾ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯನ್ನು ಸೌದಿ ಅರೇಬಿಯಾ ಖಂಡಿಸಿದೆ. “ರಫಾದಲ್ಲಿನ ಅಮಾಯಕ ಪ್ಯಾಲೆಸ್ಟೈನ್ ನಿರಾಶ್ರಿತರ ಡೇರೆಗಳ ಮೇಲೆ ದಾಳಿ ನಡೆಸುತ್ತಿರುವ ಇಸ್ರೇಲಿ ಪಡೆಗಳ ನಿರಂತರ ಹತ್ಯಾಕಾಂಡಗಳನ್ನು ರಿಯಾದ್ ಖಂಡಿಸುತ್ತದೆ. ರಫಾ ಮತ್ತು ಆಕ್ರಮಿತ ಪ್ಯಾಲೆಸ್ಟೈನ್ನಲ್ಲಿ ನಡೆಯುತ್ತಿರುವ ಪ್ರಾಣ ಹಾನಿಗಳಿಗೆ ಇಸ್ರೇಲ್ ಸಂಪೂರ್ಣವಾಗಿ ಹೊಣೆಗಾರನಾಗಿದೆ.” ಎಂದು ಸೌದಿ ವಿದೇಶಾಂಗ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.