ಬಾಲಿವುಡ್ ನಟ ಸನ್ನಿ ಡಿಯೋಲ್ ಮೇಲೆ ಗಂಭೀರ ಆರೋಪಗಳು ಕೇಳಿಬಂದಿವೆ. 2023ರಲ್ಲಿ ಬಿಡುಗಡೆ ಆದ ‘ಗದರ್ 2’ ಸಿನಿಮಾದಿಂದ ಅವರ ಬೇಡಿಕೆ ಹೆಚ್ಚಾಗಿದೆ. ಆದರೆ ಅನೇಕ ನಿರ್ಮಾಪಕರಿಗೆ ಸನ್ನಿ ಡಿಯೋಲ್ ಮೋಸ ಮಾಡಿದ್ದಾರೆ ಎನ್ನಲಾಗಿದೆ. ಬಾಲಿವುಡ್ ನಿರ್ಮಾಪಕ ಸೌರವ್ ಗುಪ್ತ ಅವರು ಸುದ್ದಿಗೋಷ್ಠಿ ನಡೆಸಿ ಶಾಕಿಂಗ್ ವಿಚಾರಗಳನ್ನು ಬಯಲು ಮಾಡಿದ್ದಾರೆ.
ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಪಳಗಿರುವ ಸೌರವ್ ಗುಪ್ತಾ ಅವರು ಸಿನಿಮಾ ನಿರ್ಮಾಪಕನಾಗಿಯೂ ಗುರುತಿಸಿಕೊಂಡಿದ್ದಾರೆ. ಅವರಿಂದ ಸನ್ನಿ ಡಿಯೋಲ್ ಕೋಟ್ಯಂತರ ರೂಪಾಯಿ ಹಣ ಪಡೆದು ಮೋಸ ಮಾಡಿದ್ದಾರೆ ಎನ್ನಲಾಗಿದೆ.
2016ರಲ್ಲಿಯೇ ಸನ್ನಿ ಡಿಯೋಲ್ ಅವರಿಗೆ ಒಂದು ಸಿನಿಮಾದಲ್ಲಿ ನಟಿಸುವ ಸಲುವಾಗಿ ಸೌರವ್ ಗುಪ್ತಾ ಅವರು 1 ಕೋಟಿ ರೂಪಾಯಿ ಅಡ್ವಾನ್ಸ್ ನೀಡಿದ್ದರು. ಆದರೆ ಈ ಸಿನಿಮಾ ಈವರೆಗೆ ಸೆಟ್ಟೇರಿಲ್ಲ. ‘ನಾವು ಅವರಿಗೆ 1 ಕೋಟಿ ರೂಪಾಯಿ ಅಡ್ವಾನ್ಸ್ ನೀಡಿದ್ದೆವು. ಆದರೆ ನಮ್ಮ ಸಿನಿಮಾ ಮಾಡುವ ಬದಲು ಅವರು ಬೇರೆ ಸಿನಿಮಾದಲ್ಲಿ ನಟಿಸಿದರು. ಅಲ್ಲದೇ ಪದೇ ಪದೇ ನನ್ನಿಂದ ಅವರು ಹೆಚ್ಚು ಹಣ ಕೇಳಿದರು. ಈತನಕ ನನ್ನಿಂದ 2.55 ಕೋಟಿ ರೂಪಾಯಿ ಹಣ ಸನ್ನಿ ಡಿಯೋಲ್ ಅವರ ಖಾತೆಗೆ ಹೋಗಿದೆ’ ಎಂದು ಸೌರವ್ ಗುಪ್ತಾ ಹೇಳಿದ್ದಾರೆ.
ಅಷ್ಟೇ ಅಲ್ಲದೇ ಸನ್ನಿ ಡಿಯೋಲ್ ಅವರ ಮೇಲೆ ಫೋರ್ಜರಿ ಆರೋಪ ಕೂಡ ಎದುರಾಗಿದೆ. ‘ನಾವು ಒಪ್ಪಂದ ಪತ್ರ ಓದಿದಾಗ ಅವರು ಫೋರ್ಜರಿ ಮಾಡಿರುವುದು ತಿಳಿಯಿತು. 4 ಕೋಟಿ ರೂಪಾಯಿ ಸಂಭಾವನೆ ಬದಲಿಗೆ 8 ಕೋಟಿ ರೂಪಾಯಿ ಎಂದು ತಿದ್ದಿದ್ದರು’ ಎಂದಿದ್ದಾರೆ ಸೌರವ್ ಗುಪ್ತಾ. ಮತ್ತೋರ್ವ ನಿರ್ಮಾಪಕ ಸುನೀಲ್ ದರ್ಶನ್ ಕೂಡ ತಮಗೆ ಸನ್ನಿ ಡಿಯೋಲ್ ಅವರಿಂದ ಮೋಸ ಆಗಿದೆ ಎಂದು ಆರೋಪಿಸಿದ್ದಾರೆ.