ಸೂಪರ್ ಸ್ಟಾರ್ ರಜನಿಕಾಂತ್ ತಮ್ಮ 73ನೇ ವಯಸ್ಸಿನಲ್ಲೂ ಸಖತ್ ಆಕ್ಟೀವ್ ಆಗಿದ್ದಾರೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳಿಗೆ ಬಣ್ಣ ಹಚ್ಚುತ್ತಿರೋ ನಟ ಪ್ರತಿಭಾರಿಯೂ ಹೊಸದೇನೋ ಕಲಿಯಬೇಕು ಎಂದು ಉತ್ಸಾಹದಿಂದಿರುತ್ತಾರೆ. ಅಂತೆಯೇ ಈ ಬಾರಿಯೂ ಹೊಸ ಅನುಭವ ಪಡೆಯಬೇಕು ಎಂದು ಹಿಮಾಲಯದ ಗುಹೆಗಳತ್ತ ಹೆಜ್ಜೆ ಹಾಕಿದ್ದಾರೆ.
ರಜನಿಕಾಂತ್ ನಟನೆಯ ‘ಕೂಲಿ’ ಸಿನಿಮಾದ ಶೂಟಿಂಗ್ ಆರಂಭಿಸಬೇಕಿದೆ. ಅದಕ್ಕೂ ಮುನ್ನ ಅಧ್ಯಾತ್ಮದ ಅನುಭವ ಪಡೆಯಲು ಅವರು ಕೆಲವು ಸ್ಥಳಗಳಿಗೆ ತೆರಳಲಿದ್ದಾರೆ. ಈಗಾಗಲೇ ಕೇದರನಾಥಕ್ಕೆ ಹೋಗಿರುವ ತಲೈವ ಹಿಮಾಲಯಕ್ಕೂ ಭೇಟಿ ನೀಡಲಿದ್ದಾರೆ. ಅಲ್ಲಿನ ಗುಹೆಗಳಲ್ಲಿ ಅಧ್ಯಾತ್ಮದ ಹೊಸ ಅನುಭವ ಪಡೆಯಲಿದ್ದಾರೆ. ಅಲ್ಲಿಂದ ವಾಪಸ್ ಬಂದ ನಂತರ ‘ಕೂಲಿ’ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿ ಆಗಲಿದ್ದಾರೆ.
ರಜನಿಕಾಂತ್ ಗುರುವಾರ ಮುಂಜಾನೆಯೇ ಚೆನ್ನೈನಿಂದ ಡೆಹರಾಡೂನ್ ತಲುಪಿದ್ದಾರೆ. ಡೆಹರಾಡೂನ್ ವಿಮಾನ ನಿಲ್ದಾಣದಲ್ಲಿ ಅವರು ಮಾಧ್ಯಮಗಳ ಜೊತೆ ಮಾತನಾಡಿ, ‘ಪ್ರತಿ ವರ್ಷ ನಾನು ಹೊಸ ಅನುಭವ ಪಡೆಯುತ್ತೇನೆ. ಅದರಿಂದ ನನ್ನ ಅಧ್ಯಾತ್ಮದ ಪಯಣ ಮುಂದುವರಿಯುತ್ತದೆ. ಈ ಬಾರಿ ಕೂಡ ನನಗೆ ಹೊಸ ಅನುಭವ ಆಗಲಿದೆ ಅಂತ ನಾನು ನಂಬಿದ್ದೇನೆ’ ಎಂದಿದ್ದಾರೆ.
‘ಇಡೀ ಜಗತ್ತಿಗೆ ಅಧ್ಯಾತ್ಮ ಬೇಕು. ಪ್ರತಿಯೊಬ್ಬ ಮನುಷ್ಯರಿಗೂ ಅದು ಮುಖ್ಯ. ಆಧ್ಯಾತ್ಮಿಕವಾಗಿ ಇರುವುದು ಎಂದರೆ ಶಾಂತಿ, ನೆಮ್ಮದಿಯಿಂದ ಇರುವುದು ಮತ್ತು ದೇವರಲ್ಲಿ ನಂಬಿಕೆ ಇಡುವುದು’ ಎಂದಿದ್ದಾರೆ ರಜನಿಕಾಂತ್. ಬದ್ರಿನಾಥ್, ಕೇದಾರನಾಥ್ ಮುಂತಾದ ಸ್ಥಳಗಳಿಗೆ ತೆರಳುವುದಾಗಿ ಅವರು ಮಾಹಿತಿ ನೀಡಿದ್ದಾರೆ. ಈ ಹಿಂದೆಯೂ ರಜನಿಕಾಂತ್ ಹಿಮಾಲಯಕ್ಕೆ ತೆರಳಿದ್ದರು.