ಕಳೆದ ವರ್ಷ ರಿಲೀಸ್ ಆದ ವಿಜಯ್ ದೇವರಕೊಂಡ ಸಹೋದರ ಆನಂದ್ ದೇವರಕೊಂಡ ನಟನೆಯ ಬೇಬಿ ಸಿನಿಮಾ ಸೂಪರ್ ಹಿಟ್ ಆಗಿತ್ತು. ಬೇಬಿ ಕಥೆ ನೋಡಿದ ಪ್ರತಿಯೊಬ್ಬರು ಚಿತ್ರವನ್ನು ಮೆಚ್ಚಿಕೊಂಡಿದ್ದರು. ಆದರೆ ಇದೀಗ ಸಿನಿಮಾ ನಿರ್ದೇಶಕನ ವಿರುದ್ಧ ಕೃತಿಚೌರ್ಯದ ಆರೋಪ ಕೇಳಿ ಬಂದಿದ್ದು, ಅದಕ್ಕೆ ಸಾಕ್ಷ್ಯಗಳನ್ನು ನಿರ್ದೇಶಕರೊಬ್ಬರು ಬಿಡುಗಡೆ ಮಾಡಿದ್ದಾರೆ.
‘ಬೇಬಿ’ ಸಿನಿಮಾ ಬಿಡುಗಡೆಗೆ ಮುನ್ನವೇ ನಿರ್ದೇಶಕ ಶಿರಿನ್ ಶ್ರೀರಾಮ್ ಎಂಬುವರು ‘ಬೇಬಿ’ ಸಿನಿಮಾದ ನಿರ್ದೇಶಕ ಸಾಯಿ ರಾಜೇಶ್ ವಿರುದ್ಧ ಕೃತಿಚೌರ್ಯದ ಆರೋಪ ಮಾಡಿದ್ದರು. ಆಗಲೇ ಸಾಯಿ ರಾಜೇಶ್ ವಿರುದ್ಧ ದೂರು ನೀಡಿದ್ದರು. ಪ್ರಕರಣ ಸಂಬಂಧ ಎಫ್ಐಆರ್ ಸಹ ದಾಖಲಾಗಿದೆ. ಇದೀಗ ನಿರ್ದೇಶಕ ಶಿರಿನ್ ಶ್ರೀರಾಮ್ ‘ಬೇಬಿ’ ಸಿನಿಮಾ, ತಮ್ಮ ಕತೆಯನ್ನು ಕದ್ದು ಮಾಡಿದ ಸಿನಿಮಾ ಎಂಬುದಕ್ಕೆ ಸಾಕ್ಷ್ಯಗಳನ್ನು ಪುಸ್ತಕದ ಮಾದರಿಯಲ್ಲಿ ಬಿಡುಗಡೆ ಮಾಡಿದ್ದಾರೆ. ಈ ಪುಸ್ತಕಕ್ಕೆ ‘ಬೇಬಿ ಲೀಕ್ಸ್’ ಎಂದು ಹೆಸರಿಟ್ಟಿದ್ದಾರೆ. ಪುಸ್ತಕವು ಆನ್ಲೈನ್ನಲ್ಲಿ ಉಚಿತವಾಗಿ ಡೌನ್ಲೋಡ್ಗೆ ಲಭ್ಯವಿದೆ.
ನಿರ್ದೇಶಕ ಶಿರಿನ್, 2015ರಲ್ಲಿ ನಿರ್ದೇಶಕ ಸಾಯಿ ರಾಜೇಶ್ಗೆ ‘ಬೇಬಿ’ ಸಿನಿಮಾದ ಕತೆ ಹೇಳಿದ್ದರಂತೆ. ಆ ಕತೆಯನ್ನು ಅವರು ಪತ್ರಿಕೆಯೊಂದರಲ್ಲಿ ಪ್ರಕಟವಾಗಿದ್ದ ವರದಿ ನೋಡಿ ಮಾಡಿಕೊಂಡಿದ್ದರಂತೆ. ಒಬ್ಬ ಯುವತಿಯನ್ನು ಇಬ್ಬರು ಯುವಕರು ಕೊಂದ ಘಟನೆಯ ವರದಿಯದು. ಆ ವರದಿಯಿಂದ ಸ್ಪೂರ್ತಿ ಪಡೆದಿದ್ದ ಶಿರಿನ್, ಒಬ್ಬ ಬಡ ಹುಡುಗಿ ಒಬ್ಬ ಶ್ರೀಮಂತ ಹಾಗೂ ಒಬ್ಬ ಹುಡುಗನನ್ನು ಏಕಕಾಲದಲ್ಲಿ ಪ್ರೇಮಿಸುವ ಕತೆಯನ್ನು ಬರೆದುಕೊಂಡು ಕತೆಯನ್ನು ‘ಬೇಬಿ’ ನಿರ್ದೇಶಕ ಸಾಯಿ ರಾಜೇಶ್ ಗೆ ಹೇಳಿದ್ದರಂತೆ. ಕತೆ ಕೇಳಿದ್ದ ರಾಜೇಶ್, ನಿರ್ಮಾಣ ಮಾಡುವ ಭರವಸೆ ಕೊಟ್ಟಿದ್ದರಂತೆ. ಆದರೆ ಆ ನಂತರ ಅವರಿಬ್ಬರ ನಡುವೆ ಯಾವುದೋ ಭಿನ್ನಾಭಿಪ್ರಾಯದಿಂದ ಪರಸ್ಪರ ದೂರಾದರು. ಬಳಿಕ ರಾಜೇಶ್ ‘ಬೇಬಿ’ ಸಿನಿಮಾ ಮಾಡಿದರು.
ರಾಜೇಶ್ ತಮ್ಮ ಕತೆಯನ್ನು ಕದ್ದು ‘ಬೇಬಿ’ ಸಿನಿಮಾ ಮಾಡಿದ್ದಾರೆಂದು ಆರೋಪಿಸಿ ಶಿರಿನ್ ‘ಬೇಬಿ ಲೀಕ್ಸ್’ ಪುಸ್ತಕ ಬಿಡುಗಡೆ ಮಾಡಿರುವುದಲ್ಲದೆ, ಆಗ ತಾವು ಸಿನಿಮಾಕ್ಕಾಗಿ ಮಾಡಿದ್ದ ಕೆಲವು ನಟ-ನಟಿಯರ ಆಡಿಷನ್ ವಿಡಿಯೋಗಳನ್ನು ಸಹ ಬಿಡುಗಡೆ ಮಾಡಿದ್ದಾರೆ. ಇದೀಗ ಶಿರಿನ್ ‘ಪ್ರೇಮಿಂಚೊದ್ದು’ ಹೆಸರಿನ ಸಿನಿಮಾ ಮಾಡಿದ್ದು ಆ ಸಿನಿಮಾ ಜೂನ್ 7ಕ್ಕೆ ಬಿಡುಗಡೆ ಆಗಲಿದೆ.