ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರ ಆರೋಪ ಹೊತ್ತಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿದೇಶದಿಂದ ಬೆಂಗಳೂರಿಗೆ ಮರಳಿದ್ದಾನೆ. 34 ದಿನಗಳ ಕಾಲ ತಲೆ ನರೆಸಿಕೊಂಡು ಎಸ್ ಐಟಿ ಜೊತೆ ಆಟ ಆಡುತ್ತಿದ್ದ ಆಟಕ್ಕೆ ಇಂದು ತೆರೆಬಿದ್ದಿದೆ.
ಜರ್ಮನಿಯ ಮ್ಯೂನಿಕ್ನಿಂದ ಲುಫ್ತಾನ ವಿಮಾನದಲ್ಲಿ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದ ಪ್ರಜ್ವಲ್ನನ್ನು ಎಸ್ಐಟಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಟರ್ಮಿನಲ್ ಎರಡರಲ್ಲಿ ವಿಮಾನ ಲ್ಯಾಂಡ್ ಆಗುತ್ತಿದ್ದಂತೆ ಅಲರ್ಟ್ ಆಗಿದ್ದ ಎಸ್.ಐ.ಟಿ ತಂಡ ಇಮಿಗ್ರೇಷನ್ ಇಲಾಖೆ ಅಧಿಕಾರಿಗಳು ಪ್ರೋಸಸ್ ಮುಗಿಯುತ್ತಿದ್ದಂತೆ ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.
ಈಗಾಗಲೇ ಪ್ರಜ್ವಲ್ ಮೇಲೆ ಬ್ಲೂ ಕಾರ್ನರ್, ಲುಕ್ ಔಟ್ ಹಾಗೂ ವಾರೆಂಟ್ ಇದ್ದಿದ್ದರಿಂದ ವಿಮಾನದಿಂದ ಇಳಿದ ಬಳಿಕೆ ಪ್ರಜ್ವಲ್ ನನ್ನು ಇಮಿಗ್ರೇಷನ್ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದರು.
ರಾಜ್ಯದಲ್ಲಿ ಏಪ್ರಿಲ್ 26ರಂದು ನಡೆದ ಮೊದಲ ಹಂತದ ಲೋಕಸಭೆ ಚುನಾವಣೆ ಮತದಾನ ಬಳಿಕ ಏಪ್ರಿಲ್ 27ರಂದು ಪ್ರಜ್ವಲ್ ರೇವಣ್ಣ ತನ್ನ ರಾಜತಾಂತ್ರಿಕ ಪಾಸ್ ಪೋರ್ಟ್ ಬಳಸಿ ಜರ್ಮನಿಗೆ ತೆರಳಿದ್ದ. ಇದೀಗ ಆತನನ್ನು ವಶಕ್ಕೆ ಪಡೆದಿರುವ ಎಸ್ಐಟಿ ಪೊಲೀಸರು ಎಸ್ಐಟಿ ಕಚೇರಿಗೆ ಕರೆತಂದಿದ್ದಾರೆ.