ಕೆನಡಾದಲ್ಲಿ ಶಿಕ್ಷಣ ಪಡೆಯಲು ಅಂತರಾಷ್ಟ್ರೀಯ ವಿದ್ಯಾರ್ಥಿಗಳಿಗೆ ನಕಲಿ ದಾಖಲೆ ಪತ್ರ ತಯಾರಿಸಿ ಕೊಡುತ್ತಿದ್ದ ಪ್ರಕರಣದಲ್ಲಿ ಭಾರತೀಯ ಮೂಲದ ವಲಸೆ ಏಜೆಂಟ್ ಬೃಜೇಶ್ ಮಿಶ್ರ ದೋಷಿಯೆಂದು ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ಆರೋಪಿಗೆ ಮೂರು ವರ್ಷ ಜೈಲುಶಿಕ್ಷೆ ವಿಧಿಸಿರುವುದಾಗಿ ವರದಿಯಾಗಿದೆ.
ಮಿಶ್ರಾ ವಿರುದ್ಧ ದಾಖಲಾಗಿರುವ ಐದು ಪ್ರಕರಣಗಳ ವಿಚಾರಣೆಯನ್ನು ವ್ಯಾಂಕೋವರ್ನ ಬ್ರಿಟಿಷ್ ಕೊಲಂಬಿಯಾ ಪ್ರಾಂತೀಯ ನ್ಯಾಯಾಲಯದಲ್ಲಿ ನಡೆಸಿದೆ. ಐದು ಪ್ರಕರಣಗಳಲ್ಲಿ ಮೂರರಲ್ಲಿ ಮಿಶ್ರಾ ಅಪರಾಧ ಸಾಬೀತಾಗಿದೆ. ಇತರ ಎರಡು ಪ್ರಕರಣಗಳ ವಿಚಾರಣೆಗೆ ತಡೆನೀಡಲಾಗಿದೆ.
ಪ್ರಕರಣದ ಕುರಿತು ಕೆಲವು ಸಂತ್ರಸ್ತ ವಿದ್ಯಾರ್ಥಿಗಳು ನ್ಯಾಯಾಲಯದಲ್ಲಿ ಸಾಕ್ಷಿಗಳಾಗಿ ಹಾಜರಿದ್ದರು. ಮಿಶ್ರ ಶಿಕ್ಷೆಯನ್ನು ಪೂರೈಸಿದ ಬಳಿಕ ಗಡೀಪಾರು ಪ್ರಕ್ರಿಯೆಗಳನ್ನು ಎದುರಿಸಬೇಕಾಗುತ್ತದೆ. ಕೆನಡಾದಲ್ಲಿ ಶಿಕ್ಷಣ ಪಡೆದಿದ್ದ ಭಾರತದ ಸುಮಾರು 150 ವಿದ್ಯಾರ್ಥಿಗಳು, ಇವರಲ್ಲಿ ಹೆಚ್ಚಿನವರು ಪಂಜಾಬ್ ಮೂಲದವರು, ನಕಲಿ ದಾಖಲೆಪತ್ರದ ಮೂಲಕ ಕೆನಡಾ ಪ್ರವೇಶಿಸಿರುವುದು ಕಳೆದ ವರ್ಷ ಬೆಳಕಿಗೆ ಬಂದಿತ್ತು. ಈ ವಿದ್ಯಾರ್ಥಿಗಳು 2017 ಮತ್ತು 2019ರ ನಡುವೆ ಕೆನಡಾಕ್ಕೆ ಆಗಮಿಸಿದ್ದರು. ಭಾರತದ ವಲಸೆ ಏಜೆಂಟರು ನಕಲಿ ದಾಖಲೆ ಪತ್ರದ ಮೂಲಕ ಇವರನ್ನು ಕೆನಡಾಕ್ಕೆ ಕಳುಹಿಸಿದ್ದರು ಮತ್ತು ಇವರಲ್ಲಿ ಹೆಚ್ಚಿನವರು ಬೃಜೇಶ್ ಮಿಶ್ರಾನ ಸಂಸ್ಥೆಯ ಪ್ರತಿನಿಧಿಗಳು ಎಂದು ಕೆನಡಾ ಅಧಿಕಾರಿಗಳು ಪ್ರಕರಣದಲ್ಲಿ ಉಲ್ಲೇಖಿಸಿದ್ದಾರೆ.