‘ಗ್ಯಾಂಗ್ಸ್ ಆಫ್ ಗೋದಾವರಿ’ ಸಿನಿಮಾದ ಪ್ರೀರಿಲೀಸ್ ಈವೆಂಟ್ನಲ್ಲಿ ತೆಲುಗು ನಟಿ ಅಂಜಲಿ ಅವರನ್ನು ಎಲ್ಲರ ಎದುರೇ ತಳ್ಳುವ ಮೂಲಕ ನಟ ಬಾಲಯ್ಯ ಸಾಕಷ್ಟು ಸುದ್ದಿಯಾಗಿದ್ದರು. ಬಾಲಯ್ಯ ಕುಡಿದು ನಟಿಯೊಂದಿಗೆ ಈ ರೀತಿ ವರ್ತಿಸಿದ್ದಾರೆ ಎಂದು ಸಾಕಷ್ಟು ಮಂದಿ ಅಸಮಾಧಾನ ಹೊರ ಹಾಕಿದ್ದರು. ಅಲ್ಲದೆ ಈ ಬಗ್ಗೆ ನಿರ್ಮಾಪಕರು ಕೂಡ ಸ್ಪಷ್ಟನೆ ನೀಡಿದ್ದರು. ಇದೀಗ ಸ್ವತಃ ನಟಿ ಅಂಜಲಿ ಘಟನೆಯ ಬಗ್ಗೆ ಪರೋಕ್ಷವಾಗಿ ಮಾತನಾಡಿದ್ದಲ್ಲದೆ, ಬಾಲಯ್ಯಗೆ ಧನ್ಯವಾದ ಹೇಳಿದ್ದಾರೆ. ಅನೇಕರು ಇದನ್ನು ತೇಪೆ ಹಚ್ಚುವ ಕೆಲಸ ಎಂದಿದ್ದಾರೆ.
ಇತ್ತೀಚೆಗೆ ‘ಗ್ಯಾಂಗ್ಸ್ ಆಫ್ ಗೋದಾವರಿ’ ಚಿತ್ರದ ಪ್ರೀ-ರಿಲೀಸ್ ಈವೆಂಟ್ ನಡೆದಿದೆ. ಈ ವೇಳೆ ಬಾಲಯ್ಯ ಮದ್ಯ ಸೇವನೆ ಮಾಡಿದ್ದರು ಎನ್ನುವ ಆರೋಪ ಇದೆ. ಇದಕ್ಕೆ ಸಾಕ್ಷಿ ಎಂಬಂತೆ ಅವರ ಎದುರು ಮದ್ಯ ತುಂಬಿದೆ ಎನ್ನಲಾದ ಬಾಟಲಿ ಇತ್ತು. ಈ ಬಗ್ಗೆ ತಂಡ ಸ್ಪಷ್ಟನೆ ನೀಡಿತ್ತು. ‘ಅಸಲಿಗೆ ಅಲ್ಲಿ ಬಾಟಲಿ ಇರಲೇ ಇಲ್ಲ. ಗ್ರಾಫಿಕ್ಸ್ ಮಾಡಿದ ಬಾಟಲಿ ಇಡಲಾಗಿದೆ’ ಎಂದು ತಂಡ ಹೇಳಿಕೊಂಡಿತ್ತು. ಈಗ ಅಂಜಲಿ ಅವರು ವೈರಲ್ ಸುದ್ದಿಗೆ ಸ್ಪಷ್ಟನೆ ನೀಡಲು ಮುಂದಾಗಿದ್ದಾರೆ.
‘ನಮ್ಮ ಗ್ಯಾಂಗ್ಸ್ ಆಫ್ ಗೋದಾವರಿ ಚಿತ್ರದ ಪ್ರೀ ರಿಲೀಸ್ ಈವೆಂಟ್ಗೆ ಬಂದು ಬೆಂಬಲ ನೀಡಿದ್ದಕ್ಕೆ ಬಾಲಕೃಷ್ಣ ಅವರಿಗೆ ಧನ್ಯವಾದ. ನಮ್ಮಿಬ್ಬರ ಮಧ್ಯೆ ಪರಸ್ಪರ ಗೌರವ ಇದೆ. ನಮ್ಮ ನಡುವೆ ಬಹಳ ವರ್ಷಗಳಿಂದ ಒಳ್ಳೆಯ ಗೆಳೆತನ ಇದೆ. ನಿಮ್ಮ ಜೊತೆ ಮತ್ತೊಮ್ಮೆ ವೇದಿಕೆ ಹಂಚಿಕೊಳ್ಳಲು ಖುಷಿ ಇದೆ’ ಎಂದು ಅಂಜಲಿ ಹೇಳಿದ್ದಾರೆ.