ಮುಂಬೈ: ಪುಣೆಯ ಅಪ್ರಾಪ್ತ ಬಾಲಕನಿಂದ ಸಂಭವಿಸಿದ ಪೋರ್ಷೆ ಕಾರು ಅಪಘಾತ ಪ್ರಕರಣಕ್ಕೆ ದಿನಕ್ಕೊಂದು ಟ್ವಿಸ್ಟ್ ಸಿಗುತ್ತಿದೆ. ಇಬ್ಬರು ಅಮಾಯಕರನ್ನು ಬಲಿ ಪಡೆದ ಈ ಘಟನೆ ಹಾಗೂ ಅಪ್ರಾಪ್ತನನ್ನು ರಕ್ಷಿಸಲು ಮಾಡಿರೋ ಕುತಂತ್ರಗಳ ಸರಮಾಲೆಯೇ ರೋಚಕವಾಗಿದೆ. ಮಹಾರಾಷ್ಟ್ರ ಸರ್ಕಾರಕ್ಕೆ ಮುಜುಗರ ತಂದಿರುವ ಈ ಅಪಘಾತ ಕೇಸ್ಗೆ ಈಗ ಮತ್ತೊಂದು ಮೆಗಾ ತಿರುವು ಸಿಕ್ಕಿದೆ.
ಅಪ್ರಾಪ್ತ ಬಾಲಕನ ಒಂದು ಅಪಘಾತದಿಂದ ಈಗ ಇಡೀ ಕುಟುಂಬವೇ ಜೈಲುಪಾಲಾಗುವಂತೆ ಮಾಡಿದೆ. ಮಗನನ್ನು ಬಚಾವ್ ಮಾಡಲು ಹೋದ ತಂದೆ, ತಾತನನ್ನು ಬಂಧಿಸಲಾಗಿತ್ತು. ಇದೀಗ ಅಪ್ರಾಪ್ತ ಬಾಲಕ ತಾಯಿಯನ್ನು ಅರೆಸ್ಟ್ ಮಾಡಲಾಗಿದೆ.
ನಿನ್ನೆ ರಾತ್ರಿ ಅಪ್ರಾಪ್ತ ವೇದಾಂತ ಅಗರವಾಲ್ ಅವರ ತಾಯಿ ಶಿವಾನಿ ಅಗರವಾಲ್ ಅವರನ್ನು ಬಂಧಿಸಲಾಗಿದೆ. ಶಿವಾನಿ ಅವರು ಬಾಲಕನ ರಕ್ತ ಪರೀಕ್ಷೆ ವೇಳೆ ತಮ್ಮ ರಕ್ತವನ್ನು ಪರೀಕ್ಷೆೆಗೆ ನೀಡಿದ್ದರು. ಇದರಿಂದ ಮಗನ ರಕ್ತ ಪರೀಕ್ಷೆಯಿಂದ ಆಲ್ಕೋಹಾಲ್ ಸೇವನೆ ದೃಢಪಡಿಸುವುದನ್ನು ತಪ್ಪಿಸಲು ಮುಂದಾಗಿದ್ದರು.
ಪೊಲೀಸರ ತನಿಖೆ ವೇಳೆ ಅಪ್ರಾಪ್ತನ ರಕ್ತದ ಸ್ಯಾಂಪಲ್ ಬದಲು ಬೇರೆಯವರ ರಕ್ತದ ಸ್ಯಾಂಪಲ್ ನೀಡಿದ್ದು ಪತ್ತೆಯಾಗಿದೆ. ವೈದ್ಯರು ಅಪ್ರಾಪ್ತನ ತಾಯಿಯ ರಕ್ತ ಪರೀಕ್ಷೆ ಮಾಡಿ ಆಲ್ಕೋಹಾಲ್ ಸೇವನೆಯ ನೆಗೆಟಿವ್ ವರದಿ ನೀಡಿದ್ದರು. ಈ ಪ್ರಕರಣದಲ್ಲಿ ಪುಣೆಯ ಪೊಲೀಸರು ತಾಯಿ ಶಿವಾನಿ ಅಗರವಾಲ್ ಅವರನ್ನು ಬಂಧಿಸಿದ್ದಾರೆ.
ಕಳೆದ ಮೇ 19ರಂದು ಪುಣೆಯಲ್ಲಿ ಪೋರ್ಷೆ ಕಾರು ವೇಗವಾಗಿ ಬಂದು ಗುದ್ದಿತ್ತು. ಭೀಕರ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದರು. ಪೋರ್ಷೆ ಕಾರು ಚಲಾಯಿಸುತ್ತಿದ್ದ ಅಪ್ರಾಪ್ತ ಬಾಲಕನನ್ನು ಹಿಡಿದು ಹಿಗ್ಗಾಮುಗ್ಗ ಥಳಿಸಿ ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ್ದರು. ಮದ್ಯಪಾನ ಮಾಡಿ ಪೋರ್ಷೆ ಕಾರು ಚಲಾಯಿಸುತ್ತಿದ್ದ ಅಪ್ರಾಪ್ತ ಬಾಲಕನಿಗೆ ಜಾಮೀನು ಮಂಜೂರಾಗಿತ್ತು. ಅಪ್ರಾಪ್ತ ಬಾಲಕನಿಗೆ ವಿಧಿಸಿದ್ದ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು. ಬಿಲ್ಡರ್ ಮಗನ ಈ ದುರಂತ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ.