ಈ ಬಾರಿ ನಾವು ಗೆದ್ದರೆ ಪಾಕ್ ಆಕ್ರಮಿತ ಕಾಶ್ಮೀರವನ್ನು ಭಾರತಕ್ಕೆ ಸೇರಿಸಲಾಗುವುದು ಎಂಬ ಬಿಜೆಪಿ ಭರವಸೆಗಳ ನಡುವೆಯೇ ಆಜಾದ್ ಕಾಶ್ಮೀರ ವಿದೇಶಿ ಸರಹದ್ದು ಎಂದು ಪಾಕಿಸ್ತಾನ ಸರ್ಕಾರ, ಇಸ್ಲಾಮಾಬಾದ್ ಹೈಕೋರ್ಟ್ಗೆ ಅಚ್ಚರಿಯ ಮಾಹಿತಿ ನೀಡಿದೆ.
ಕಾಶ್ಮೀರಿ ಕವಿ ಅಹ್ಮದ್ ಫರ್ಹಾದ್ ಶಾ ನಿಗೂಢ ನಾಪತ್ತೆ ಹಿನ್ನೆಲೆಯಲ್ಲಿ ಅವರ ಪತ್ನಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಹೈಕೋರ್ಟ್ಗೆ ಮಾಹಿತಿ ನೀಡಿದ ಪಾಕಿಸ್ತಾನದ ಹೆಚ್ಚುವರಿ ಅಟಾರ್ನಿ ಜನರಲ್, ‘ಆಜಾದ್ ಕಾಶ್ಮೀರದಲ್ಲಿ ಅಹ್ಮದ್ ಶಾ ಇರುವ ಕಾರಣ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲು ಸಾಧ್ಯವಿಲ್ಲ. ಅದು ವಿದೇಶಿ ಸರಹದ್ದು. ಅಲ್ಲಿಗೆ ಪ್ರತ್ಯೇಕ ಸಂವಿಧಾನ, ನ್ಯಾಯಾಲಯಗಳಿವೆ. ಅಲ್ಲಿನ ಕೋರ್ಟ್ಗಳು ನೀಡಿದ ತೀರ್ಪನ್ನು ವಿದೇಶಿ ನ್ಯಾಯಾಲಯದ ತೀರ್ಪುಗಳ ರೀತಿ ಪರಿಗಣಿಸಲಾಗುತ್ತದೆ’ ಎಂದು ಮಾಹಿತಿ ನೀಡಿದರು.
ಈ ವೇಳೆ ನ್ಯಾ. ಕಯಾನಿ ಅವರು, ‘ಅದು ವಿದೇಶಿ ನೆಲವೆಂದಾದಲ್ಲಿ ಪಾಕಿಸ್ತಾನ ಸೇನೆ ಆ ಪ್ರದೇಶಕ್ಕೆ ಪ್ರವೇಶ ಮಾಡಿದ್ದು ಹೇಗೆ’ ಎಂದು ಪ್ರಶ್ನಿಸಿದರು.
ಪಾಕ್ ಆಕ್ರಮಿತ ಕಾಶ್ಮೀರ ಭಾರತದ್ದೇ ಭೂಭಾಗವಾಗಿದ್ದು, ಅದನ್ನು ಭಾರತ ಸರ್ಕಾರ ಮರಳಿ ವಶಕ್ಕೆ ಪಡೆಯಲಿದೆ ಎಂಬುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಘೋಷಿಸಿದ್ದಾರೆ.
ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ್ದ ಗೃಹ ಸಚಿವ ಅಮಿತ್ಶಾ, ಈ ಬಾರಿ ಮತ್ತೊಮ್ಮೆ ಮೋದಿ ಪ್ರಧಾನಿಯಾದರೆ ಪಾಕ್ ಆಕ್ರಮಿತ ಕಾಶ್ಮೀರವನ್ನ ಭಾರತ ಸರ್ಕಾರ ಮರಳಿ ವಶಕ್ಕೆ ಪಡೆಯಲಿದೆ ಎಂದು ಹೇಳುವ ಮೂಲಕ ‘ಪಾಕಿಸ್ತಾನದ ಬಳಿ ಅಣುಬಾಂಬ್ ಇರುವುದನ್ನು ಭಾರತ ನೆನಪಿನಲ್ಲಿಟ್ಟುಕೊಳ್ಳಬೇಕು’ ಎಂದು ಕೆಲವು ಪ್ರತಿಪಕ್ಷ ನಾಯಕರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.