ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಮೃತಪಟ್ಟು ನಾಲ್ಕು ವರ್ಷ ಕಳೆದಿದೆ. ಸುಶಾಂತ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾದ ಮುಂಬೈನ ಅಪಾರ್ಟ್ಮೆಂಟ್ ಅನ್ನು ಇತ್ತೀಚೆಗೆ ನಟಿ ಅದಾ ಶರ್ಮಾ ಖರೀದಿ ಮಾಡಿದ್ದಾರೆ. ಇದೀಗ ನಟಿ ಅಪಾರ್ಟ್ ಮೆಂಟ್ ಗೆ ಶಿಫ್ಟ್ ಆಗಿದ್ದು ಅಲ್ಲಿಯೇ ವಾಸಿಸುತ್ತಿದ್ದಾರೆ. ಸುಶಾಂತ್ ಸಿಂಗ್ ರಜಪೂತ್ ಇದ್ದ ಮನೆಯಲ್ಲಿ ವಾಸಾವಾಗಿರುವ ನಟಿ ಅದಾ ಶರ್ಮಾ ಅಲ್ಲಿನ ವಾತಾವರಣ ಹೇಗಿದೆ ಎಂಬುದನ್ನು ವಿವರಿಸಿದ್ದಾರೆ.
ಈ ಮನೆಯನ್ನು ಖರೀದಿಸುವುದು ಬೇಡ ಎಂದು ಅವರಿಗೆ ಕೆಲವರು ಹೇಳಿದ್ದರಂತೆ. ಆದರೆ ಅಂಥವರ ಮಾತುಗಳಿಗೆ ಅದಾ ಶರ್ಮಾ ಕಿವಿ ಕೊಟ್ಟಿಲ್ಲ. ತಮಗೆ ಸರಿ ಅನಿಸಿದ್ದನ್ನು ಮಾಡಿದ್ದಾರೆ. ‘ನಾಲ್ಕು ತಿಂಗಳಿಂದ ಬ್ಯುಸಿ ಇದ್ದೆ. ಆ ಮನೆಗೆ ಹೋಗಿ ಸೆಟ್ಲ್ ಆಗಲು ಈಗತಾನೇ ಸಮಯ ಸಿಕ್ಕಿದೆ’ ಎಂದು ನಟಿ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
‘ಇಷ್ಟು ದಿನಗಳವರೆಗೆ ನಾನು ಬಾಂದ್ರದ ಪಾಲಿ ಹಿಲ್ ನಲ್ಲಿರುವ ಮನೆಯಲ್ಲಿ ವಾಸವಾಗಿದ್ದೆ. ಇದೇ ಮೊದಲ ಬಾರಿಗೆ ನಾನು ಆ ಜಾಗದಿಂದ ಹೊರಬಂದಿದ್ದು. ಸ್ಥಳಗಳ ವೈಬ್ ಬಗ್ಗೆ ನಾನು ಹೆಚ್ಚು ಸೂಕ್ಷ್ಮವಾಗಿದ್ದೇನೆ. ಹೊಸ ಮನೆಯಲ್ಲಿ ನನಗೆ ಪಾಸಿಟಿವ್ ವೈಬ್ ಅನುಭವ ಆಗಿದೆ’ ಎಂದು ಅದಾ ಶರ್ಮಾ ಹೇಳಿದ್ದಾರೆ. ಸುಶಾಂತ್ ನಿಧನರಾದ ಈ ಮನೆಯಲ್ಲಿ ಭಯ ಆಗಬಹುದು ಎಂದು ಅನೇಕರು ಭಾವಿಸಿದ್ದರು. ಆದರೆ ಆ ರೀತಿಯ ಅನುಭವಗಳು ಅದಾ ಶರ್ಮಾಗೆ ಆಗಿಲ್ಲ ಎಂದಿದ್ದಾರೆ.
ಸುಶಾಂತ್ ಸಿಂಗ್ ರಜಪೂತ್ ಸಾವಿಗೀಡಾದ ಮನೆಯನ್ನು ಈಗ ಅದಾ ಶರ್ಮಾ ಅವರು ಹೊಸದಾಗಿ ವಿನ್ಯಾಸಗೊಳಿಸಿದ್ದಾರೆ. ಇಡೀ ಮನೆಗೆ ಬಿಳಿ ಬಣ್ಣ ಬಳಿಯಲಾಗಿದೆ. ಕೆಳಗಡೆ ಫ್ಲೋರ್ ಅನ್ನು ದೇವಸ್ಥಾನದ ರೀತಿ ಪರಿವರ್ತಿಸಲಾಗಿದೆ. ಟಾಪ್ ಫ್ಲೋರ್ನ ಒಂದು ಕೊಠಡಿಯನ್ನು ಮ್ಯೂಸಿಕ್ಗಾಗಿ ಮೀಸಲಿಡಲಾಗಿದೆ. ಇನ್ನೊಂದು ರೂಮ್ ಅನ್ನು ಡ್ಯಾನ್ಸ್ ಸ್ಟುಡಿಯೋ ಮಾಡಲಾಗಿದೆ. ಟೆರೇಸ್ನಲ್ಲಿ ಗಾರ್ಡನ್ ಮಾಡಲಾಗಿದ್ದು ಮನೆಯಲ್ಲಿ ಸಾಕಷ್ಟು ಬದಲಾವಣೆಯನ್ನು ನಟಿ ಮಾಡಿದ್ದಾರೆ.