ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ನಡೆದಿದ್ದ ರೇವ್ ಪಾರ್ಟಿಯಲ್ಲಿ ಭಾಗಿಯಾಗಿ ಸಿಕ್ಕಿಬಿದ್ದಿರುವ ತೆಲುಗು ನಟಿ ಹೇಮಾ ಅವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ಆನೇಕಲ್ನ 4ನೇ ಹೆಚ್ಚುವರಿ ಸಿವಿಲ್ ಜೆಎಂಎಫ್ಸಿ ನ್ಯಾಯಾಲಯದ ಜಡ್ಜ್ ಸಲ್ಮಾ ಎ.ಎಸ್. ಎದುರು ಹೇಮಾರನ್ನು ಹಾಜರುಪಡಿಸಲಾಗಿತ್ತು. ನಟಿಗೆ ಜೂನ್ 14ರ ತನಕ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಹೈದರಾಬಾದ್ನಿಂದ ಬೆಂಗಳೂರಿಗೆ ಬಂದು ಎಲೆಕ್ಟ್ರಾನಿಕ್ ಸಿಟಿಯ ಜೆ.ಆರ್. ಫಾರ್ಮ್ಹೌಸ್ನಲ್ಲಿ ರೇವ್ ಪಾರ್ಟಿ ಮಾಡಿದ ಆರೋಪ ಹೇಮಾ ಅವರ ಮೇಲಿದೆ. ಈ ಪ್ರಕರಣದಲ್ಲಿ ಅವರು ಜೈಲು ಸೇರಿದ್ದಾರೆ.
ಇತ್ತೀಚೆಗೆ ಡ್ರಗ್ಸ್ ಸೇವನೆಗೆ ಸಂಬಂಧಿಸಿದಂತೆ ಹೇಮಾ ರಿಪೋರ್ಟ್ ಪಾಸಿಟೀವ್ ಬಂದಿತ್ತು. ಈ ವೇಳೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಮೊದಲು ವಿಚಾರಣೆಗೆ ಹಾಜರಾಗುವಂತೆ ಅವರಿಗೆ ನೋಟಿಸ್ ನೀಡಲಾಗಿತ್ತು. ಆದರೆ ಅವರು ಅನಾರೋಗ್ಯದ ನೆಪ ಹೇಳಿ ವಿಚಾರಣೆಗೆ ಹಾಜರಾಗದೇ ಸಮಯಾವಕಾಶ ಕೇಳಿದ್ದರು. ಹಾಜರಾಗದ ಹಿನ್ನೆಲೆಯಲ್ಲಿ ಸಿಸಿಬಿ ಅಧಿಕಾರಿಗಳು 2ನೇ ನೋಟಿಸ್ ಕೂಡ ನೀಡಿದ್ದರು.
ಇದೀಗ ನಟಿಯನ್ನು ಬಂಧಿಸಿರುವ ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ. ಬೆಂಗಳೂರಲ್ಲಿ ಹೇಮಾ ಅವರನ್ನು ಬಂಧಿಸಿದ ಬಳಿಕ ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ಅವರ ಮೆಡಿಕಲ್ ಟೆಸ್ಟ್ ಮಾಡಿಸಲಾಗಿದೆ. ರಕ್ತ, ಮೂತ್ರ, ಕೂದಲು, ಉಗುರಿನ ಸ್ಯಾಂಪಲ್ ಪಡೆಯಲಾಗಿದೆ. ಫಾರ್ಮ್ಹೌಸ್ ಮೇಲೆ ದಾಳಿ ನಡೆದ ದಿನವೂ ಹೇಮಾ ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿತ್ತು.