ಭಾರತೀಯ ಮೂಲದ 23 ವರ್ಷದ ತೆಲುಗು ವಿದ್ಯಾರ್ಥಿನಿಯೊಬ್ಬರು ಇತ್ತೀಚೆಗೆ ಕ್ಯಾಲಿಫೋರ್ನಿಯಾದಲ್ಲಿ ನಾಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ.
ಹೈದರಾಬಾದ್ ಮೂಲದ ಮತ್ತು ಸ್ಯಾನ್ ಬರ್ನಾರ್ಡಿನೊದ ಕ್ಯಾಲಿಫೋರ್ನಿಯಾ ಸ್ಟೇಟ್ ಯೂನಿವರ್ಸಿಟಿಯಲ್ಲಿ ಅಧ್ಯಯನ ಮಾಡುತ್ತಿರುವ ನಿತಿಶಾ ಕಂದುಲಾ ಮೇ 28 ರಿಂದ ನಾಪತ್ತೆಯಾಗಿದ್ದಾರೆ. ನಿತೀಶಾ ಅವರು ಕೊನೆಯ ಬಾರಿಗೆ ಲಾಸ್ ಏಂಜಲೀಸ್ನಲ್ಲಿ ಕಾಣಿಸಿಕೊಂಡಿದ್ದರು ಎಂದು ವಿಶ್ವವಿದ್ಯಾಲಯವು ಎಕ್ಸ್ನಲ್ಲಿ ಪೋಸ್ಟ್ ಮಾಡಿದೆ. ಸ್ಥಳೀಯ ಪೊಲೀಸರು ಶೋಧ ಕಾರ್ಯಾಚರಣೆ ಪ್ರಾರಂಭಿಸಿದ್ದು, ವಿದ್ಯಾರ್ಥಿನಿಯ ಪತ್ತೆಗಾಗಿ ಸಾರ್ವಜನಿಕರಿಂದ ಸಹಾಯ ಕೋರಿದ್ದಾರೆ.
ತೆಲಂಗಾಣ ಮೂಲದ ವಿದ್ಯಾರ್ಥಿಯೊಬ್ಬ ನಾಪತ್ತೆಯಾದ ಒಂದು ತಿಂಗಳೊಳಗೆ ಇಂಥ ಮತ್ತೊಂದು ಘಟನೆ ನಡೆದಿರುವುದು ಕಳವಳ ಮೂಡಿಸಿದೆ. ತೆಲಂಗಾಣ ಮೂಲದ ರೂಪೇಶ್ ಚಂದ್ರ ಚಿಂತಾಕಿಂಡಿ ಕಳೆದ ತಿಂಗಳು ಚಿಕಾಗೋದಲ್ಲಿ ನಾಪತ್ತೆಯಾಗಿದ್ದರು. ಈ ವಿದ್ಯಾರ್ಥಿ ಬಗ್ಗೆ ಈವರೆಗೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ಈ ವರ್ಷದ ಆರಂಭದಲ್ಲಿ, ಹೈದರಾಬಾದಿನ ಮೊಹಮ್ಮದ್ ಅಬ್ದುಲ್ ಅರಾಫತ್ ಎಂಬುವರು ಮಾರ್ಚ್ನಲ್ಲಿ ಕಾಣೆಯಾಗಿದ್ದರು. ಒಂದು ತಿಂಗಳ ನಂತರ ಅವರ ಶವ ಓಹಿಯೋದ ಕ್ಲೀವ್ ಲ್ಯಾಂಡ್ನ ಸರೋವರದಲ್ಲಿ ಪತ್ತೆಯಾಗಿತ್ತು. ಕ್ಲೀವ್ ಲ್ಯಾಂಡ್ನಲ್ಲಿನ ಡ್ರಗ್ ಮಾಫಿಯಾ ಗ್ಯಾಂಗ್ ಅಬ್ದುಲ್ನನ್ನು ಅಪಹರಿಸಿ, ಬಿಡುಗಡೆಗಾಗಿ ಆತನ ತಂದೆಯ ಬಳಿ ಒತ್ತೆ ಹಣಕ್ಕೆ ಬೇಡಿಕೆ ಇಟ್ಟಿದ್ದವು ಎಂದು ವರದಿಗಳು ತಿಳಿಸಿವೆ.
ಈ ಪ್ರಕರಣಗಳು ಯುನೈಟೆಡ್ ಸ್ಟೇಟ್ಸ್ನಲ್ಲಿ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳಿಗೆ ಹೆಚ್ಚಾಗುತ್ತಿರುವ ಅಪಾಯ ಎತ್ತಿ ತೋರಿಸಿವೆ. ಕಾಣೆಯಾದ ಈ ವ್ಯಕ್ತಿಗಳನ್ನು ಪತ್ತೆಹಚ್ಚಲು ಸಾಧ್ಯವಾಗುವಂಥ ಮಾಹಿತಿ ಇದ್ದರೆ, ಅದನ್ನು ತಿಳಿಸುವಂತೆ ಮತ್ತು ಇಂಥ ಘಟನೆಗಳ ಬಗ್ಗೆ ಜಾಗರೂಕರಾಗಿರುವಂತೆ ಅಧಿಕಾರಿಗಳು ಜನರಿಗೆ ಮನವಿ ಮಾಡಿದ್ದಾರೆ.