ಬೆಂಗಳೂರು: ಪೊಲೀಸರೆಂದು ಹೇಳಿ ಖದೀಮರು, 1 ಕೋಟಿ 12 ಲಕ್ಷ ಮೌಲ್ಯದ ಚಿನ್ನದ ಗಟ್ಟಿ ದೋಚಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ನಗರದ ಆನಂದ್ ರಾವ್ ಸರ್ಕಲ್ ಬಳಿ ನಡೆದಿದ್ದು, 2 ಕೆಜಿ 200 ಗ್ರಾಂ ಚಿನ್ನದ ಗಟ್ಟಿ ಕಳ್ಳತನವಾಗಿದೆ. ಅಬ್ದುಲ್ ರಜಾಕ್, ಮಲ್ಲಯ್ಯ ಹಾಗೂ ಸುನೀಲ್ ಎಂಬುವರು ರಾಯಚೂರಿನ ಚಿನ್ನದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಮಾಲೀಕರ ಸೂಚನೆಯಂತೆ ಚಿನ್ನದ ಗಟ್ಟಿ ಖರೀದಿಗೆ ಬೆಂಗಳೂರಿಗೆ ಬಂದಿದ್ದರು. ಅದರಂತೆ ಚಿನ್ನದ ಖರೀದಿಗೆ ಬಂದು ಬೆಂಗಳೂರಿನಲ್ಲಿ ಚಿನ್ನ ಖರೀದಿ ಮಾಡಿದ್ದರು.
ಮಾರ್ಚ್ 11 ರ ರಾತ್ರಿ ವಾಪಸ್ಸು ರಾಯಚೂರಿಗೆ ಹೋಗಲೆಂದು ಬಸ್ನಲ್ಲಿ ಕುಳಿತಿದ್ದರು. ಆಗ ಅಬ್ದುಲ್ ರಜಾಕ್ ಹಾಗೂ ಮಲ್ಲಯ್ಯ ಶೌಚಾಲಯಕ್ಕೆಂದು ಸುನೀಲ್ ಒಬ್ಬನನ್ನೇ ಬಸ್ನಲ್ಲಿ ಬಿಟ್ಟು, ಚಿನ್ನದ ಗಟ್ಟಿ ಇದ್ದ ಬ್ಯಾಗ್ ಸಮೇತ ಶೌಚಾಲಯದತ್ತ ತೆರಳುತ್ತಿದ್ದರು. ಈ ವೇಳೆ ಆಗಮಿಸಿದ ಇಬ್ಬರು ತಾವು ಪೊಲೀಸರೆಂದು ಇಬ್ಬರನ್ನು ಎಲ್ಲಿಗೊ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಇಬ್ಬರ ಬಳಿಯಿದ್ದ ಬ್ಯಾಗ್ ಕಸಿದು ಪರಾರಿಯಾಗಿದ್ದಾರೆ. ಉಪ್ಪಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ.