ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸದ್ದು ಮಾಡಿರುವ ಬೆಂಗಳೂರು ಗ್ರಾಮಾಂತರ, ಮಂಡ್ಯ, ಹಾಸನ ಹೈವೋಲ್ಟೇಜ್ ಕ್ಷೇತ್ರಗಳ ಫಲಿತಾಂಶದ ಕಡೆ ಎಲ್ಲರ ಚಿತ್ತ ನೆಟ್ಟಿದೆ.
ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಹಾಲಿ ಸಂಸದ ಡಿಕೆ ಸುರೇಶ್ ಮಾತಿನ ಬಾಣ, ಮಂಡ್ಯ ಕ್ಷೇತ್ರದಲ್ಲಿ ಕಣಕ್ಕಿಳಿದಿರೋ ಹೆಚ್ಡಿ ಕುಮಾರಸ್ವಾಮಿ ಹಾಗೂ ಕಾಂಗ್ರೆಸ್ ನಾಯಕರ ನಡುವಿನ ವಾಗ್ಯುದ್ಧ ಅಂತೂ ಇಡೀ ರಾಜ್ಯದಲ್ಲೇ ಪ್ರತಿಧ್ವನಿಸುವಂತೆ ಮಾಡಿತ್ತು. ಮಂಡ್ಯ ಹಾಗೂ ಬೆಂಗಳೂರು ಗ್ರಾಮಾಂತರ ಕ್ಷೇತ್ರಗಳು ಘಟಾನುಘಟಿಗಳ ಶಕ್ತಿಪ್ರದರ್ಶನಕ್ಕೆ ವೇದಿಕೆಯಾಗಿತ್ತು.
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ಈ ಬಾರಿ ಜಿದ್ದಾಜಿದ್ದಿನ ಕಣವಾಗಿ ಇಡೀ ರಾಜ್ಯದ ಗಮನ ಸೆಳೆದಿದೆ. ಜಯದೇವ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಿ ಲಕ್ಷಾಂತರ ಜನರ ಹೃದಯ ಗೆದ್ದಿರೋ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಅಳಿಯ ಡಾ.ಮಂಜುನಾಥ್ ಹಾಲಿ ಸಂಸದ ಡಿಕೆ ಸುರೇಶ್ ವಿರುದ್ಧ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಈಗಾಗಲೇ ಎರಡು ಬಾರಿ ಸಂಸದರಾಗಿರುವ ಡಿ.ಕೆ.ಸುರೇಶ್ ಹ್ಯಾಟ್ರಿಕ್ ಗೆಲುವು ಸಾಧಿಸುವ ಹುಮ್ಮಸ್ಸಿನಲ್ಲಿದ್ದಾರೆ. ಈ ಮೂಲಕ ಬೆಂಗಳೂರು ಗ್ರಾಮಾಂತರ ಕ್ಷೇತ್ರ ರಾಜಕೀಯ ಶಕ್ತಿ ಕೇಂದ್ರವಾಗಿ ಬದಲಾಗಿಬಿಟ್ಟಿದೆ.
2019ರ ಚುನಾವಣೆಯಲ್ಲಿ ಸಕ್ಕರೆನಾಡು ಮಂಡ್ಯ ಲೋಕಸಭಾ ಕ್ಷೇತ್ರ ಸುಮಲತಾ ಸ್ಪರ್ಧೆ ಕಾರಣಕ್ಕೆ ರಾಷ್ಟ್ರಮಟ್ಟದಲ್ಲೂ ಗಮನ ಸೆಳೆದಿತ್ತು. ಕಾಂಗ್ರೆಸ್ ಜೆಡಿಎಸ್ಗೆ ಸೆಡ್ಡು ಹೊಡೆದು ಸ್ವಾಭಿಮಾನದ ಪಣದೊಂದಿಗೆ ಗೆದ್ದು ಸಂಸತ್ ಪ್ರವೇಶಿಸಿದ್ದರು. ಅಂದು ಕುಮಾರಸ್ವಾಮಿ ಪುತ್ರ ನಿಖಿಲ್ ಸುಮಲತಾ ವಿರುದ್ಧ ಸೋತಿದ್ದರು. ಆದ್ರೆ ಈ ಬಾರಿ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಕಣಕ್ಕಿಳಿಯೋ ಮೂಲಕ ಮಂಡ್ಯ ಲೋಕಕಣದಲ್ಲಿ ಮತ್ತೊಮ್ಮೆ ಸಂಚಲನ ಸೃಷ್ಟಿಸಿದ್ದಾರೆ.
ಮಂಡ್ಯ ಕ್ಷೇತ್ರದಿಂದ ಎನ್ಡಿಎ ಅಭ್ಯರ್ಥಿಯಾಗಿ ಹೆಚ್ಡಿ ಕುಮಾರಸ್ವಾಮಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಟಾರ್ ಚಂದ್ರು ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ.
ಇನ್ನು ದೇಶಕ್ಕೆ ಕನ್ನಡಿಗ ಪ್ರಧಾನಿ ಕೊಟ್ಟಿರೋ ಜಿಲ್ಲೆ ಹಾಸನದಲ್ಲಿ ಈ ಬಾರಿ ಟಫ್ ಫೈಟ್ ಏರ್ಪಟ್ಟಿದೆ. ಅಶ್ಲೀಲ ಪೆನ್ಡ್ರೈವ್ ವೈರಲ್ ಹಾಗೂ ಹಾಲಿ ಸಂಸದನ ವಿರುದ್ಧದ ಅತ್ಯಾಚಾರ ಪ್ರಕರಣದಿಂದ ದೇಶದಲ್ಲೇ ಸುದ್ದಿಯಾಗಿರೋ ಹಾಸನ ಲೋಕಸಭಾ ಕ್ಷೇತ್ರದಲ್ಲೂ ಜಿದ್ದಾಜಿದ್ದಿನ ಫೈಟ್ ನಡೆದಿದೆ. ಜೆಡಿಎಸ್ ಬಿಜೆಪಿ ಮೈತ್ರಿಕೂಟದಿಂದ ಹಾಲಿ ಸಂಸದ ಪ್ರಜ್ವಲ್ ರೇವಣ್ಣ ಕಣದಲ್ಲಿದ್ದರೆ, ಕಾಂಗ್ರೆಸ್ನಿಂದ ಶ್ರೇಯಸ್ ಪಟೇಲ್ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.
ವಿಶೇಷವೆಂದರೆ 1999ರಲ್ಲಿ ಮಾಜಿ ಪ್ರಧಾನಿ ದೇವೇಗೌಡರನ್ನೇ ಮಣಿಸಿದ್ದ ಕಾಂಗ್ರೆಸ್ ನಾಯಕ ದಿವಂಗತ ಪುಟ್ಟಸ್ವಾಮಿ ಗೌಡರ ಮೊಮ್ಮಗ ಕಳೆದ ವಿಧಾನಸಭಾ ಕ್ಷೇತ್ರ ಚುನಾವಣೆಯಲ್ಲಿ ಮಾಜಿ ಸಚಿವ ರೇವಣ್ಣ ವಿರುದ್ಧ ಅತ್ಯಲ್ಪ ಮತಗಳಲ್ಲಿ ಪರಾಜಯಗೊಂಡಿದ್ದ ಶ್ರೇಯಸ್ ಪಟೇಲ್ ಈಬಾರಿ ಪ್ರಜ್ವಲ್ ಗೆ ಎದುರಾಳಿಯಾಗಿರೋದು ಕುತೂಹಲ ಮತ್ತಷ್ಟು ಹೆಚ್ಚಿಸಿದೆ.
ಹೀಗೆ ಬೆಂಗಳೂರು ಗ್ರಾಮಾಂತರ, ಮಂಡ್ಯ ಹಾಗೂ ಹಾಸನ ಲೋಕಸಭಾ ಕ್ಷೇತ್ರಗಳಲ್ಲಿ ನಾನಾ ನೀನಾ ಅನ್ನುವಂಥಾ ಮತಕುಸ್ತಿ ನಡೆದಿದೆ. ಈ ಮೂರು ಕ್ಷೇತ್ರಗಳ ಘಟಾನುಘಟಿಗಳ ಪೈಕಿ ಡಿಕೆ ಸುರೇಶ್ಗೆ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಾದ್ರೆ. ಇತ್ತ ಪ್ರಥಮ ಬಾರಿಗೆ ಲೋಕಸಭೆಯತ್ತ ಚಿತ್ತ ಹರಿಸಿರೋ ಕುಮಾರಸ್ವಾಮಿ ಮಂಡ್ಯದಿಂದ ಸ್ಪರ್ಧೆ ಮಾಡಿದ್ದಾರೆ