ಬೆಂಗಳೂರು: ಫಾಕ್ಸ್ಕಾನ್ ಕಂಪನಿ ಜೊತೆ ಹೂಡಿಕೆ ಒಪ್ಪಂದ ಆಗದೇ ಇದ್ದರೂ ಆಪಲ್ ಐಪೋನ್ ಕಂಪನಿ ತಯಾರಿಕಾ ಘಟಕ ಸ್ಥಾಪನೆ ಬಗ್ಗೆ ಮುಖ್ಯಮಂತ್ರಿಗಳು ಸುಳ್ಳು ಹೇಳುವ ಮೂಲಕ ರಾಜ್ಯದ ಜನರಿಗೆ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ. ಈ ಸಂಬಂಧ ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ದಿನೇಶ್ ಗುಂಡೂರಾವ್, ಐಫೋನ್ ಸೇರಿದಂತೆ ಇನ್ನಿತರ ಎಲೆಕ್ಟ್ರಾನಿಕ್ ಸಾಧನಗಳನ್ನು ತಯಾರಿಸುವ ಫಾಕ್ಸ್ಕಾನ್ ಸಂಸ್ಥೆ ಭಾರತದಲ್ಲಿ ಹೊಸ ಹೂಡಿಕೆ ಒಪ್ಪಂದ ಆಗಿಲ್ಲ. ಆದರೆ ಸಿಎಂ ಬೊಮ್ಮಾಯಿಯವರು ನಿನ್ನೆ ಆಯಪಲ್ ಕಂಪನಿ ರಾಜ್ಯದಲ್ಲಿ ತಯಾರಿಕಾ ಘಟಕ ಸ್ಥಾಪಿಸಲಿದ್ದು, ಇದರಿಂದ 1 ಲಕ್ಷ ಉದ್ಯೋಗ ಸೃಷ್ಟಿಯಾಗುವುದಾಗಿ ಹೇಳಿದ್ದರು. ಸಿಎಂ ಸುಳ್ಳು ಹೇಳಿದ್ಯಾಕೆ.?
ಫಾಕ್ಸ್ಕಾನ್ ಸಂಸ್ಥೆ ಹೊಸ ಹೂಡಿಕೆಯ ಬಗ್ಗೆ ಯಾವುದೇ ಒಪ್ಪಂದ ಮಾಡಿಕೊಂಡಿಲ್ಲ. ಇದನ್ನು ಸ್ವತಃ ಆ ಸಂಸ್ಥೆಯೇ ಸ್ಪಷ್ಟಪಡಿಸಿದೆ. ಆದರೆ ಮುಖ್ಯಮಂತ್ರಿಗಳ ಕಚೇರಿ ಕರ್ನಾಟಕದಲ್ಲಿ ಈ ಸಂಸ್ಥೆ 5740 ಕೋಟಿ ಹೂಡಿಕೆ ಮಾಡಲಿದೆ ಎಂದಿದೆ. ಒಪ್ಪಂದವೇ ಆಗದೇ ಹೂಡಿಕೆ ಮಾಡಲು ಹೇಗೆ ಸಾಧ್ಯ.? ರಾಜ್ಯದ ಮುಖ್ಯಮಂತ್ರಿಗಳು ಆಧಾರ ರಹಿತವಾಗಿ ಹೀಗೆ ಮಾತಾಡಬಹುದೇ? ಆಯಪಲ್ ಕಂಪನಿಯ ತಯಾರಿಕಾ ಘಟಕ ಸ್ಥಾಪನೆಯ ಬಗ್ಗೆ ಮುಖ್ಯಮಂತ್ರಿಗಳು ಸುಳ್ಳು ಹೇಳುವ ಮೂಲಕ ರಾಜ್ಯದ ಜನರಿಗೆ ತಪ್ಪು ಮಾಹಿತಿ ನೀಡಿದ್ದಾರೆ. ಒಬ್ಬ ಮುಖ್ಯಮಂತ್ರಿ ಹೀಗೆ ಸಾರ್ವಜನಿಕರನ್ನು ತಪ್ಪು ದಾರಿಗೆ ಎಳೆಯಬಹುದೆ.? ಹಿರಿಯಕ್ಕನ ಚಾಳಿ ಮನೆ ಮಂದಿಗೆಲ್ಲ ಎಂಬಂತೆ ಬೊಮ್ಮಾಯಿಯವರು ಹೀಗೆ ಸುಳ್ಳು ಹೇಳುವ ಕಲೆಯನ್ನು ಮೋದಿಯವರಿಂದ ಕಲಿತರೆ ? ಎಂದು ಕಾಂಗ್ರೆಸ್ ನಾಯಕ ಪ್ರಶ್ನಿಸಿದ್ದಾರೆ.