ದೆಹಲಿ ಜೂನ್ 04: ಚುನಾವಣಾ ಆಯೋಗದ ವೆಬ್ಸೈಟ್ನ ಟ್ರೆಂಡ್ಗಳ ಪ್ರಕಾರ ಅಮೇಠಿಯಲ್ಲಿ ಬಿಜೆಪಿಯ ಹಾಲಿ ಸಂಸದೆ ಸ್ಮೃತಿ ಇರಾನಿ ಹಿನ್ನಡೆಯಾಗಿದೆ. ಇಲ್ಲಿ ಕಾಂಗ್ರೆಸ್ನ ಕಿಶೋರಿ ಲಾಲ್ ಶರ್ಮಾ ಮುಂದೆ ಇದ್ದಾರೆ. ಸ್ಮೃತಿ ಇರಾನಿ ಈ ಸ್ಥಾನದಿಂದ ಎರಡನೇ ಬಾರಿಗೆ ಸ್ಪರ್ಧಿಸುತ್ತಿದ್ದು ರಾಹುಲ್ ಗಾಂಧಿ ಅವರ ಕುಟುಂಬದ ಸಹಾಯಕ ಕೆಎಲ್ ಶರ್ಮಾ ಅವರು ಕಾಂಗ್ರೆಸ್ ಭದ್ರಕೋಟೆಯಿಂದ ಸಂಸತ್ತಿಗೆ ಪಾದಾರ್ಪಣೆ ಮಾಡುವ ಭರವಸೆಯಲ್ಲಿದ್ದಾರೆ. ಅಂಚೆ ಮತ ಎಣಿಕೆಯಿಂದ ಬೆಳಗ್ಗೆ 11.12ರ ಟ್ರೆಂಡ್ಗಳ ಪ್ರಕಾರ, ಶರ್ಮಾ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಸ್ಮೃತಿ ಇರಾನಿಗಿಂತ 27,000 ಮತಗಳಿಂದ ಮುಂದಿದ್ದಾರೆ.
2019 ರ ಲೋಕಸಭಾ ಚುನಾವಣೆಯಲ್ಲಿ, ಸ್ಮೃತಿ ಇರಾನಿ ಅವರು ಅಮೇಠಿ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಸಂಸದರಾಗಿದ್ದ ರಾಹುಲ್ ಗಾಂಧಿ ಅವರನ್ನು 4 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲಿಸಿದ್ದರು. ಮಾಜಿ ಕಾಂಗ್ರೆಸ್ ಮುಖ್ಯಸ್ಥ ರಾಹುಲ್ ಗಾಂಧಿ 2004 ರಿಂದ ಅಮೇಠಿ ಸ್ಥಾನವನ್ನು ಪ್ರತಿನಿಧಿಸಿದ್ದು, 2019 ರವರೆಗೆ ಸತತ ಮೂರು ಅವಧಿಗೆ ಕ್ಷೇತ್ರದಿಂದ ಸಂಸತ್ತಿನ ಸದಸ್ಯರಾಗಿದ್ದರು.
ಚುನಾವಣೆಯ ಸಿದ್ಧತೆಯ ಹೊತ್ತಲ್ಲಿ ರಾಹುಲ್ ಗಾಂಧಿ ಅಥವಾ ಅವರ ಸಹೋದರಿ ಪ್ರಿಯಾಂಕಾ ಗಾಂಧಿ ಈ ಸ್ಥಾನದಿಂದ ಸ್ಪರ್ಧಿಸುತ್ತಾರೆ ಎಂಬ ಊಹಾಪೋಹಗಳು ಹಬ್ಬಿತ್ತು. ಆದರೆ ನಾಮಪತ್ರ ಸಲ್ಲಿಸುವ ಕೊನೆಯ ದಿನದಂದು ಶರ್ಮಾ ಅವರನ್ನು ಅಮೇಠಿ ಅಭ್ಯರ್ಥಿ ಎಂದು ಕಾಂಗ್ರೆಸ್ ಘೋಷಿಸಿತ್ತು. ಶರ್ಮಾ ನಾಮ ನಿರ್ದೇಶನದ ಮೂಲಕ 25 ವರ್ಷಗಳಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ನಿಂದ ಗಾಂಧಿಯೇತರ ಅಭ್ಯರ್ಥಿಯೊಬ್ಬರು ಅಮೇಠಿ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದಾರೆ.
ರಾಜೀವ್ ಗಾಂಧಿ, ಸಂಜಯ್ ಗಾಂಧಿ, ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯಂತಹ ಗಾಂಧಿ-ನೆಹರೂ ಕುಟುಂಬದ ಸದಸ್ಯರಿಂದ ಪ್ರತಿನಿಧಿಸಲ್ಪಟ್ಟಿರುವ ಅಮೇಠಿಯು ವರ್ಷಗಳಿಂದ ಕಾಂಗ್ರೆಸ್ನ ಭದ್ರಕೋಟೆಯಾಗಿದೆ. ಆದಾಗ್ಯೂ, 2019 ರ ಚುನಾವಣೆಯಲ್ಲಿ ಬಿಜೆಪಿಯ ಸ್ಮೃತಿ ಇರಾನಿ ಅವರು ರಾಹುಲ್ ಗಾಂಧಿಯನ್ನು ಸೋಲಿಸುವ ಮೂಲಕ ಕಾಂಗ್ರೆಸ್ನ ಕೋಟೆಯನ್ನು ಭೇದಿಸಿದಾಗ ಪಕ್ಷವು ಭಾರಿ ಹಿನ್ನಡೆಯನ್ನು ಎದುರಿಸಿತು. ಈ ಸ್ಥಾನವು 1980 ರಿಂದ ಗಾಂಧಿ ಕುಟುಂಬಕ್ಕೆ ನಿಷ್ಠವಾಗಿತ್ತು. ಸೋನಿಯಾ ಗಾಂಧಿ ಅವರು ಸಕ್ರಿಯ ರಾಜಕೀಯಕ್ಕೆ ಪ್ರವೇಶಿಸಿದ ನಂತರ ಅಮೇಠಿಯನ್ನು ಪ್ರತಿನಿಧಿಸಿದರು. 1999 ರಲ್ಲಿ ಮೊದಲ ಬಾರಿಗೆ ಸ್ಪರ್ಧಿಸಿದರು. ಆದಾಗ್ಯೂ, ಅವರು ಐದು ವರ್ಷಗಳ ನಂತರ ತಮ್ಮ ಮಗ ರಾಹುಲ್ಗಾಗಿ ಸ್ಥಾನವನ್ನು ನೀಡಿ ಬರೇಲಿಯಲ್ಲಿ ಸ್ಪರ್ಧಿಸಿದರು.