ಮಂಡ್ಯ :- ಲೋಕಸಭಾ ಕ್ಷೇತ್ರದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿಗೆ ಭರ್ಜರಿ ಗೆಲುವು ಸಿಕ್ಕಿದೆ. 2 ಲಕ್ಷದ 82 ಸಾವಿರಕ್ಕೂ ಹೆಚ್ಚಿನ ಮತಗಳ ಅಂತರದಿಂದ ಕುಮಾರಸ್ವಾಮಿ ಭರ್ಜರಿ ಜಯಭೇರಿ ಬಾರಿಸಿದ್ದು, ಊಹೆಗೆ ನಿಲುಕದ ಫಲಿತಾಂಶವನ್ನು ಸಕ್ಕರೆನಾಡಿನ ಮತದಾರರು ನೀಡಿದ್ದಾರೆ.
ಬಿಜೆಪಿ ಜೊತೆ ದೋಸ್ತಿ ಮಾಡಿಕೊಂಡಿದ್ದ ಕುಮಾರಸ್ವಾಮಿ ಸಕ್ಸಸ್ ಆಗಿದ್ದು, ಕಾಂಗ್ರೆಸ್ ಪಕ್ಷದ ಸ್ಟಾರ್ ಚಂದ್ರು ವಿರುದ್ಧ ಕಣಕ್ಕಿಳಿದಿದ್ದ ಕುಮಾರಸ್ವಾಮಿ ಭಾರೀ ಅಂತರದಿಂದ ಗೆಲುವು ಕಂಡಿದ್ದಾರೆ. ಈ ಮೂಲಕ ತನ್ನ ಮಗನಿಗಾದ ಸೋಲಿನ ಸೇಡನ್ನು ತಾವು ತೀರಿಸಿಕೊಂಡಿದ್ದಾರೆ. ಸೋತಲ್ಲೇ ನಿಂತು ಗೆದ್ದು ಮಣ್ಣಿನ ಮಗ ಅನ್ನೋದನ್ನು ಹೆಚ್.ಡಿ.ಕುಮಾರಸ್ವಾಮಿ ಪ್ರೋವ್ ಮಾಡಿದ್ದಾರೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಒಂದೂವರೆ ಲಕ್ಷ ಮತಗಳಿಂದ ನಿಖಿಲ್ ಕುಮಾರಸ್ವಾಮಿ ವಿರುದ್ಧ ಸುಮಲತಾ ಗೆದ್ದಿದ್ದರು. ಈ ಬಾರಿ ಕುಮಾರಸ್ವಾಮಿ ಈ ದಾಖಲೆಯನ್ನು ಮುರಿದು ಗೆಲುವು ಸಾಧಿಸಿದ್ದಾರೆ. ಮಂಡ್ಯ ಕ್ಷೇತ್ರದಲ್ಲಿ 18ನೇ ಸುತ್ತಿನ ಮತ ಎಣಿಕೆ ಮುಗಿದ ಬಳಿಕ ಜೆಡಿಎಸ್ ಅಭ್ಯರ್ಥಿ ಹೆಚ್.ಡಿ ಕುಮಾರಸ್ವಾಮಿ 282704 ಮತಗಳ ಮುನ್ನಡೆ ಪಡೆದು ಗೆದ್ದು ಬೀಗಿದ್ದಾರೆ. ಈ ಮೂಲಕ ಹೊಸ ದಾಖಲೆ ಬರೆದಿದ್ದಾರೆ ಕುಮಾರಸ್ವಾಮಿ.
ಈಗಾಗಲೇ ಮಂಡ್ಯದಲ್ಲಿ ಜೆಡಿಎಸ್ ಕಾರ್ಯಕರ್ತರು ಸಂಭ್ರಮಾಚರಣೆ ಆರಂಭಿಸಿದ್ದಾರೆ. ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸುತ್ತಿದ್ದಾರೆ. ಮತಎಣಿಕೆ ಆರಂಭದಿಂದಲೂ ಕುಮಾರಸ್ವಾಮಿ ಮುನ್ನಡೆ ಕಾಯ್ದುಕೊಂಡು ಬಂದಿದ್ದರು. ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಸ್ಟಾರ್ ಚಂದ್ರುಗೆ ಭಾರೀ ಮುಖಭಂಗವಾಗಿದ್ದು, ಚುನಾವಣಾ ಆಯೋಗದಿಂದ ಅಧಿಕೃತ ಘೋಷಣೆ ಮಾತ್ರ ಬಾಕಿ ಇದೆ.
ಒಕ್ಕಲಿಗ ಸಮುದಾಯ ಪ್ರಾಬಲ್ಯವಿರುವ ಈ ಕ್ಷೇತ್ರದಲ್ಲಿ ಒಕ್ಕಲಿಗರಿಬ್ಬರ ಮಧ್ಯೆಯೇ ಭಾರೀ ಪೈಪೋಟಿ ಏರ್ಪಟ್ಟಿತ್ತು. ಜೆಡಿಎಸ್ನ ಎಚ್.ಡಿ. ಕುಮಾರಸ್ವಾಮಿ ಹಾಗೂ ಕಾಂಗ್ರೆಸ್ನ ವೆಂಕಟರಮಣೇಗೌಡ ಅಲಿಯಾಸ್ ಸ್ಟಾರ್ ಚಂದ್ರು ನಡುವೆ ಬಾರಿ ಪೈಪೋಟಿ ಎದುರಾಗಿತ್ತು. ಕೊನೆಗೂ ಈ ಅಖಾಡದಲ್ಲಿ ಹೆಚ್.ಡಿ. ಕುಮಾರಸ್ವಾಮಿ ಗೆದ್ದು ಬೀಗಿದ್ದಾರೆ.