2024ರ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕುತೂಹಲ ಕೆರಳಿಸಿದ ಕ್ಷೇತ್ರಗಳಲ್ಲಿ ಶಿವಮೊಗ್ಗ ಕೂಡ ಒಂದು. ಕನ್ನಡ ಚಿತ್ರರಂಗದ ದೊಡ್ಮನೆ ಸೊಸೆ, ಶಿವರಾಜ್ ಕುಮಾರ್ ಪತ್ನಿ ಗೀತಾ ಶಿವರಾಜ್ಕುಮಾರ್ ಎರಡನೇ ಬಾರಿ ಶಿವಮೊಗ್ಗ ಲೋಕಸಭೆ ಕ್ಷೇತ್ರದಿಂದ ಸ್ಪರ್ಧೆಗೆ ಇಳಿದಿದ್ದರು. ಆದರೆ ಈ ಭಾರಿಯೂ ಜನ ಗೀತಾ ಕೈಹಿಡಿಯಲಿಲ್ಲ.
ಗೀತಾ ಶಿವರಾಜ್ಕುಮಾರ್ ಸಹೋದರ ಮಧು ಬಂಗಾರಪ್ಪ ಶಿಕ್ಷಣ ಸಚಿವರಾಗಿದ್ದಾರೆ. ಹಾಗೇ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದೆ. ಹೀಗಾಗಿ ಗೀತಾ ಶಿವರಾಜ್ಕುಮಾರ್ಗೆ ಅತೀ ಹೆಚ್ವು ಬೆಂಬಲ ಸಿಕ್ಕಿತ್ತು. ಈ ಕಾರಣಕ್ಕೆ ಶಿವಮೊಗ್ಗ ಕ್ಷೇತ್ರದ ಮತದಾರರು ಈ ಬಾರಿ ದೊಡ್ಮನೆ ಸೊಸೆಯನ್ನು ಗೆಲ್ಲಿಸಬಹುದೆಂದು ನಿರೀಕ್ಷೆ ಮಾಡಲಾಗಿತ್ತು. ಆದರೆ ನಿರೀಕ್ಷೆ ಹುಸಿಯಾಗಿದೆ. ಗೀತಾ ಸೋಲು ಕಂಡಿದ್ದಾರೆ.
ನಟ ಶಿವರಾಜ್ಕುಮಾರ್ ಪತ್ನಿಯ ಪರ ಜೋರಾಗಿಯೇ ಪ್ರಚಾರ ಮಾಡಿದ್ದರು. ಜೊತೆಗೆ ದುನಿಯಾ ವಿಜಯ್ ಕೂಡ ಪ್ರಚಾರದಲ್ಲಿ ಭಾಗಿಯಾಗಿದ್ದರು. ಇಷ್ಟೆಲ್ಲ ಬೆಂಬಲದ ಹೊರತಾಗಿಯೂ, ಅಣ್ಣಾವ್ರ ಮನೆಯ ಮೊದಲ ಸೊಸೆ ಎರಡನೇ ಬಾರಿ ಸೋಲು ಕಾಣುವಂತಾಯ್ತು.
ಯಡಿಯೂರಪ್ಪ ಪುತ್ರ ಬಿ ವೈ ರಾಘವೇಂದ್ರ ವಿರುದ್ಧ ಸ್ಪರ್ಧಿಸಿದ್ದ ಗೀತಾ ಶಿವರಾಜ್ಕುಮಾರ್ ಜೊತೆ ಕೆ ಎಸ್ ಈಶ್ವರಪ್ಪ ಕೂಡ ಅಖಾಡಕ್ಕೆ ಇಳಿದಿದ್ದರು. ಶಿವಮೊಗ್ಗದಲ್ಲಿ ತ್ರಿಕೋನ ಸ್ಪರ್ಧೆ ಇದ್ದರೂ, ಬಿ.ವೈ. ರಾಘವೇಂದ್ರ ಹಾಗೂ ಗೀತಾ ಶಿವರಾಜ್ಕುಮಾರ್ ನಡುವೆ ನೇರಾ ನೇರ ಹಣಾಹಣಿಯಿತ್ತು. ಈ ಪೈಪೋಟಿಯಲ್ಲಿ ಗೀತಕ್ಕ 1 ಲಕ್ಷದ 50 ಸಾವಿರಕ್ಕೂ ಹೆಚ್ಚು ಅಂತರದಿಂದ ಸೋಲು ಕಂಡಿದ್ದಾರೆ.