2024ರ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕುತೂಹಲ ಕೆರಳಿಸಿದ ಕ್ಷೇತ್ರಗಳಲ್ಲಿ ಶಿವಮೊಗ್ಗ ಕೂಡ ಒಂದು. ಕನ್ನಡ ಚಿತ್ರರಂಗದ ದೊಡ್ಮನೆ ಸೊಸೆ, ಶಿವರಾಜ್ ಕುಮಾರ್ ಪತ್ನಿ ಗೀತಾ ಶಿವರಾಜ್ಕುಮಾರ್ ಎರಡನೇ ಬಾರಿ ಶಿವಮೊಗ್ಗ ಲೋಕಸಭೆ ಕ್ಷೇತ್ರದಿಂದ ಸ್ಪರ್ಧೆಗೆ ಇಳಿದಿದ್ದರು. ಆದರೆ ಈ ಭಾರಿಯೂ ಜನ ಗೀತಾ ಅವರ ಕೈಹಿಡಿಯಲಿಲ್ಲ. ಶಿವಮೊಗ್ಗದಲ್ಲಿ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಜಯಭೇರಿ ಭಾರಿಸಿದ್ದಾರೆ. ಚುನಾವಣಾ ಫಲಿತಾಂಶದ ಬಳಿಕ ಶಿವರಾಜ್ ಕುಮಾರ್ ಸೋಶಿಯಲ್ ಮೀಡಿಯಾ ಮೂಲಕ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.
‘ಧನ್ಯವಾದಗಳು… ಫಲಿತಾಂಶಗಳು ನಮ್ಮ ಕಡೆಯಾಗದಿದ್ದರೂ ನಿಮ್ಮೂಂದಿಗಿನ ಈ ಪ್ರಯಾಣ ಮತ್ತು ನಮ್ಮ ಜನರ ಅಚಲವಾದ ಬೆಂಬಲಕ್ಕಾಗಿ ನಾವು ಸದಾ ಕೃತಜ್ಞರಾಗಿರುತ್ತೇವೆ. ಮತದಾರನ ನಿರ್ಣಯಕ್ಕೆ ತಲೆ ಬಾಗುತ್ತಾ, ನಾವು ಭವಿಷ್ಯದ ಬದಲಾವಣೆಗಾಗಿ ಪ್ರಯತ್ನಿಸುವುದನ್ನು ಎಂದಿನಂತೆಯೇ ಮುಂದುವರಿಸುತ್ತೇವೆ. ತಮ್ಮ ಅಚಲವಾದ ಬೆಂಬಲದೊಂದಿಗೆ ಪ್ರೋತ್ಸಾಹಿಸಿದ ಪ್ರತಿಯೊಬ್ಬ ಕಾರ್ಯಕರ್ತರು ಹಾಗೂ ವಿಶ್ವಾಸವನ್ನಿಟ್ಟು ಮತ ಹಾಕಿದ ಪ್ರತಿಯೊಬ್ಬರಿಗೂ ತುಂಬು ಹೃದಯದ ಧನ್ಯವಾದಗಳು’ ಎಂದು ಶಿವರಾಜ್ಕುಮಾರ್ ಪೋಸ್ಟ್ ಮಾಡಿದ್ದಾರೆ.
ಶಿವಮೊಗ್ಗದಲ್ಲಿ ಬಂಡಾಯ ಅಭ್ಯರ್ಥಿಯಾಗಿ ಕೆ.ಎಸ್. ಈಶ್ವರಪ್ಪ, ಜಿಜೆಪಿಯಿಂದ ಬಿ.ವೈ. ರಾಘವೇಂದ್ರ ಕಣಕ್ಕೆ ಇಳಿದಿದ್ದರು. ಕಾಂಗ್ರೆಸ್ ಪರವಾಗಿ ಗೀತಾ ಶಿವರಾಜ್ಕುಮಾರ್ ಸ್ಪರ್ಧಿಸಿದ್ದರು. ಈ ಮೂವರ ನಡುವೆ ಪೈಪೋಟಿ ಜೋರಾಗಿಯೇ ಇತ್ತು. ಗೀತಾ ಪರವಾಗಿ ನಟ ಶಿವರಾಜ್ ಕುಮಾರ್ ಹಗಲು ರಾತ್ರಿ ಕ್ಯಾಪೇನ್ ಮಾಡಿದ್ದರು. ಜೊತೆಗೆ ಬ್ಲ್ಯಾಕ್ ಕೋಬ್ರಾ ದುನಿಯಾ ವಿಜಯ್ ಕೂಡ ಕೈ ಜೋಡಿಸಿದ್ದರು. ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ಬಿ.ವೈ. ರಾಘವೇಂದ್ರ ಅವರು 7,78,721 ಮತಗಳನ್ನು ಪಡೆದು ಜಯ ಸಾಧಿಸಿದರೆ, ಗೀತಾ ಶಿವರಾಜ್ಕುಮಾರ್ ಅವರು 5,35,006 ಮತಗಳನ್ನು ಪಡೆದಿದ್ದಾರೆ.