ಕೆನಡಾದ ಸೀರಿಯಲ್ ಕಿಲ್ಲರ್ ರಾಬರ್ಟ್ ವಿಲ್ಲೀ ಪಿಕ್ಟನ್ ಜೈಲಿನಲ್ಲಿ ನಡೆದ ದಾಳಿಯಲ್ಲಿ ಸಾವಿಗೀಡಾಗಿದ್ದಾನೆ. ದಿ ಕರೆಕ್ಷನಲ್ ಸರ್ವೀಸ್ ಆಫ್ ಕೆನಡಾ 71ರ ಹರೆಯದ ರಾಬರ್ಟ್ ಸಾವನ್ನು ದೃಢಪಡಿಸಿದೆ.
26 ಮಹಿಳೆಯರ ಕೊಲೆಗೆ ಸಂಬಂಧಿಸಿದಂತೆ ರಾಬರ್ಡ್ ಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. 2007ರಲ್ಲಿ ಈತನ ಕೃತ್ಯಗಳು ಸಾಭೀತಾದ ಹಿನ್ನೆಲೆಯಲ್ಲಿ ಶಿಕ್ಷೆ ವಿಧಿಸಲಾಗಿತ್ತು. ಇದೀಗ ಕ್ವಿಬೆಕ್ನ ಪೋರ್ಟ್-ಕಾರ್ಟಿಯರ್ ಸಂಸ್ಥೆಯಲ್ಲಿ ದಾಳಿಯಲ್ಲಿ ಆರೋಪಿ ಮೃತಪಟ್ಟಿದ್ದಾನೆ.
ವ್ಯಾಂಕೋವರ್ನ ಪೋರ್ಟ್ ಕೊಕ್ವಿಟ್ಲಾಮ್ನ ಹಂದಿ ಸಾಕಣೆದಾರ ರಾಬರ್ಟ್ ಪಿಕ್ಟನ್ನ್ನು, ಎರಡು ದಶಕಗಳ ಕಾಲ ತನಿಖೆಗೆ ಒಳಪಡಿಸಲಾಗಿತ್ತು. ಹತ್ಯೆಗೀಡಾದವರಲ್ಲಿ ಹೆಚ್ಚಾಗಿ ವೇಶ್ಯೆಯರು ಮತ್ತು ಮಾದಕ ವ್ಯಸನಿಗಳು ಆಗಿದ್ದರು. 1980 ಮತ್ತು 2001 ರ ನಡುವೆ ವ್ಯಾಂಕೋವರ್ನ ಡೌನ್ಟೌನ್ ಈಸ್ಟ್ಸೈಡ್ ನೆರೆಹೊರೆಯಿಂದ ಕಣ್ಮರೆಯಾದ ಸುಮಾರು 70 ಮಹಿಳೆಯರಲ್ಲಿ ಮೋನಾ ವಿಲ್ಸನ್, ಸೆರೆನಾ ಅಬೋಟ್ಸ್ವೇ, ಮಾರ್ನಿ ಫ್ರೇ, ಬ್ರೆಂಡಾ ವೋಲ್ಫ್, ಆಂಡ್ರಿಯಾ ಜೋಸ್ಬರಿ ಮತ್ತು ಜಾರ್ಜಿನಾ ಪಾಪಿನ್ ಸೇರಿದ್ದಾರೆ.
ಈ ಮಹಿಳೆಯರು ರಾಬರ್ಟ್ ಪಿಕ್ಟನ್ನ ಕೆಟ್ಟ ತಂತ್ರಗಳಿಗೆ ಬಲಿಯಾದರು. ಅವರಿಗೆ ಹಣ ಮತ್ತು ಮಾದಕ ವಸ್ತುಗಳನ್ನು ನೀಡುವುದಾಗಿ ಸುಳ್ಳು ಭರವಸೆ ನೀಡಿ ಪಿಕ್ಟನ್ ಅವರನ್ನು ವಶಕ್ಕೆ ತೆಗೆದುಕೊಳ್ಳುತ್ತಿದ್ದ. 2008 ರ ಗಾರ್ಡಿಯನ್ ವರದಿಯ ಪ್ರಕಾರ, ಅವನ ಫಾರ್ಮ್ ನಲ್ಲಿ ಹುಡುಕಾಟ ನಡೆಸಿದಾಗ ಆತ ಕೊಂದ 49 ಮಹಿಳೆಯರಲ್ಲಿ 33 ಮಹಿಳೆಯರ ಅವಶೇಷಗಳು ಅಥವಾ ಡಿಎನ್ಎ ಪತ್ತೆಯಾಗಿತ್ತು. ತನಿಖಾಧಿಕಾರಿಗಳಿಗೆ ಆತನ ಜಮೀನಿನಲ್ಲಿ ತಲೆಬುರುಡೆಗಳು ಮತ್ತು ಪಾದಗಳು ಸೇರಿದಂತೆ ಮಾನವ ಅವಶೇಷಗಳನ್ನು ಪತ್ತೆಯಾಗಿತ್ತು. ಆತ ಮಹಿಳೆಯರನ್ನು ಹತ್ಯೆ ಮಾಡಿ ರಾತ್ರಿ ಹೊತ್ತು ಮೃತದೇಹಗಳನ್ನು ಕತ್ತರಿಸುತ್ತಿದ್ದ ಎಂಬುದು ತನಿಖೆ ವೇಳೆ ಬಯಲಾಗಿದೆ.
ಈತನ ವಿಚಾರಣೆಯ ಸಮಯದಲ್ಲಿ ಮತ್ತಷ್ಟು ಭಯಾನಕ ವಿವರಗಳು ಹೊರಬಂದವು. ರಾಬರ್ಟ್ ಪಿಕ್ಟನ್ ಮಹಿಳೆಯರನ್ನು ಕತ್ತು ಹಿಸುಕಿ ಕೊಲ್ಲುತ್ತಿದ್ದ. ಅವರ ಮೃತದೇಹಗಳನ್ನು ಕತ್ತರಿಸಿ ಹಂದಿಗೆ ತಿನ್ನಿಸುತ್ತಿದ್ದ ಎಂದು ವಿಚಾರಣೆ ವೇಳೆ ಆತ ಬಾಯಿಬಿಟ್ಟಿದ್ದ. ಆತನ ಫಾರ್ಮ್ ನಲ್ಲಿ ಹಂದಿಮಾಂಸವನ್ನು ಖರೀದಿಸಿದಾಗ ಅದರಲ್ಲಿ ಮಾನವ ಅವಶೇಷಗಳು ಇರಬಹುದು ಎಂದು ಆರೋಗ್ಯ ಅಧಿಕಾರಿಗಳು ಗ್ರಾಹಕರನ್ನು ಎಚ್ಚರಿಸಿದ್ದರು.